ದಾವಣಗೆರೆ: ಮರಳು ವ್ಯಾಪಾರಸ್ಥರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ, ಮೈಸೂರು ಮೂಲದ ಇಮ್ರಾನ್ ಸಿದ್ದೀಖಿ ಎಂಬಾತನನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ. ಆತನಿಂದ ಒಟ್ಟು 75 ಲಕ್ಷ 70 ಸಾವಿರ ರೂ. ಹಣವನ್ನು ವಶಕ್ಕೆ ಪಡೆದಿದ್ದಾರೆ. ದಾವಣಗೆರೆ ನಗರದ ಮರಳು ವ್ಯಾಪಾರಿ ಮುಬಾರಕ್ ಎಂಬುವವರು ನೀಡಿದ ದೂರಿನ ಬೆನ್ನಲ್ಲೇ ಮೈಸೂರು ಮೂಲದ ಇಮ್ರಾನ್ ಸಿದ್ದೀಖಿ ಹಾಗೂ ಚಿತ್ರದುರ್ಗ ಮೂಲದ ಆಶೋಕ್ ಅಲಿಯಾಸ್ ಜಿಮ್ಮಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಏನಿದು ಪ್ರಕರಣ?: ದಾವಣಗೆರೆ ಜಿಲ್ಲೆಯ ಮರಳು ವ್ಯಾಪಾರಿ ಮುಬಾರಕ್ ಎಂಬುವವರು ಕಾನೂನು ಪ್ರಕಾರ ಸರ್ಕಾರ ನೀಡುವ ಪರ್ಮಿಟ್ ಪಡೆದು ಮರಳು ವ್ಯಾಪಾರವನ್ನು ಮಾಡುತ್ತಿದ್ದರು. ಆದರೆ ಇವರಿಬ್ಬರೂ ನಮಗೆ ನೀನು ಪ್ರತಿ ತಿಂಗಳು 4 ಲಕ್ಷ ಹಣವನ್ನು ನೀಡ್ಬೇಕು, ಇಲ್ಲವಾದಲ್ಲಿ ನೀನು ಮರಳು ದಂಧೆಯನ್ನು ಹೇಗೆ ಮಾಡುತ್ತೀಯಾ ಮಾಡು ಎಂದು ಹೆದರಿಸಿದ್ದರು. ಅಲ್ಲದೇ ಮುಬಾರಕ್ರಿಂದ ಹಣವನ್ನು ಸಹ ಪಡೆದಿದ್ದರು. ಬಳಿಕ ಅವರು ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇದನ್ನೂ ಓದಿ: ಗೃಹಿಣಿ ಅನುಮಾನಾಸ್ಪದ ಸಾವು: ವರದಕ್ಷಿಣೆ ಕಿರುಕುಳದ ಶಂಕೆ
ಪ್ರಕರಣ ದಾಖಲಿಸಿಕೊಂಡ ಪೊಲೀಸರು ದಾಳಿ ನಡೆಸಿ, ಇಬ್ಬರನ್ನು ಮೈಸೂರಿನಲ್ಲಿ ಬಂಧಿಸಿದ್ದಾರೆ. ಆರೋಪಿತರು ಮರಳು ದಂಧೆ ಮಾಡುವವರ ಬಳಿ ಸಂಗ್ರಹಿಸಿದ್ದ ಒಟ್ಟು ಎಪ್ಪತ್ತೈದು ಲಕ್ಷದ ಎಪ್ಪತ್ತು ಸಾವಿರ ನಗದು ಹಣ, ಎರಡು ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ತನಿಖೆ ಮುಂದುವರೆದಿದೆ ಎಂದು ದಾವಣಗೆರೆ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.