ದಾವಣಗೆರೆ : ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಸಿಹಿ-ಕಹಿ ಏನೇ ಬರಲಿ ಸ್ವೀಕರಿಸುತ್ತೇನೆ ಎಂದು ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಹೊನ್ನಾಳಿ ಶಾಸಕ ಎಂ ಪಿ ರೇಣುಕಾಚಾರ್ಯ ಹೇಳಿದರು.
ನಗರದಲ್ಲಿ ನಡೆದ ಜನಸೇವಕ್ ಸಮಾವೇಶದ ಬಳಿಕ ಮಾತನಾಡಿದ ಅವರು, ನಿನ್ನೆ ದೆಹಲಿಯಲ್ಲಿ ವರಿಷ್ಠರೊಂದಿಗೆ ಸಿಎಂ ಮಾತುಕತೆ ನಡೆಸಿ ಬೆಂಗಳೂರಿಗೆ ಹಿಂದಿರುಗಿದ್ದಾರೆ. ಸಿಎಂಗೆ ಪರಮಾಧಿಕಾರ ಇದೆ. ಸಿಹಿ-ಕಹಿ ಎರಡನ್ನೂ ಸಮಾನವಾಗಿ ಸ್ವೀಕರಿಸುತ್ತೇವೆ.
ರಾಜಕಾರಣದಲ್ಲಿ ಯಾರೂ ಸನ್ಯಾಸಿಗಳಲ್ಲ. ಸಚಿವ ಸ್ಥಾನಕ್ಕೆ ಹೊಸದಾಗಿ ಅಪ್ಲಿಕೇಶನ್ ಹಾಕಬೇಕಾ, ಸಚಿವನಾಗಿ ಕೆಲಸ ಮಾಡಿದ ಅನುಭವ ಇದೆ. ಸಂಘಟನೆ ಅನುಭವ ಕೂಡ ಇದೆ. ಆದ್ದರಿಂದ ನಾನೂ ಆಕಾಂಕ್ಷಿ ಎಂದು ರೇಣುಕಾಚಾರ್ಯ ಹೇಳಿದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರ ಸಿಎಂ ಬದಲಾವಣೆ ಆಗ್ತಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಬದಲಾವಣೆ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯಗೆ ಕನಸು ಬಿದ್ದಿತ್ತಾ, ಅವರು ಯಾವಾಗಲು ಗಾಢನಿದ್ರೆಯಲ್ಲಿರುತ್ತಾರೆ.
ಆದರೆ, ಅವರಿಗೆ ಕನಸು ಬಿದ್ದಿದ್ದು, ರಾತ್ರಿಯೋ ಹಗಲುಗನಸೋ ಗೊತ್ತಿಲ್ಲ. ಸಿಎಂ ಬಿಎಸ್‌ವೈ ಬದಲಾವಣೆ ಇಲ್ಲ ಎಂದು ವರಿಷ್ಠರು ಹೇಳಿದ್ದು, ಸೂರ್ಯ- ಚಂದ್ರ ಇರೋದು ಎಷ್ಟು ಸತ್ಯವೋ ಬಿಎಸ್‌ವೈ ಎರಡೂ ವರ್ಷ ಸಿಎಂ ಆಗಿರುವುದು ಅಷ್ಟೇ ಸತ್ಯ ಎಂದರು.
ಓದಿ: ಗುಂಡಿಗೆ ಗಟ್ಟಿ ಇರೋರಿಗೆ ಮಾತ್ರ! ಮೈ ಜುಮ್ಮೆನ್ನಿಸುವ ಕಾಳಿಂಗನ ದಾಳಿ
ಸಿದ್ದರಾಮಯ್ಯನವರು ತಮ್ಮ ತಟ್ಟೆಯಲ್ಲಿ ಏನೂ ಬಿದ್ದಿದೆ ಮೊದಲು ನೋಡಿಕೊಳ್ಳಲಿ, ಡಿಕೆಶಿ ಕೆಲವರು ಬಾಯಲ್ಲಿ ಸಿಎಂ ಆಗುತ್ತೇನೆ ಎಂದು ಹೇಳಿಸುತ್ತಾರೆ. ಕೆಲವರು ಸಿದ್ದರಾಮಯ್ಯನೇ ಮತ್ತೆ ಸಿಎಂ ಅನ್ನುತ್ತಾರೆ.
ಜನಾದೇಶನೇ ಸಿಕ್ಕಿಲ್ಲ. ಸಿಎಂ ಸ್ಥಾನಕ್ಕಾಗಿ ಬಡಿದಾಡುತ್ತಿದ್ದಾರೆ. ಸಿದ್ದರಾಮಯ್ಯನವರೇ ನಿಮ್ಮದು ಚಾಮುಂಡಿನೋ, ವರುಣಾನೋ, ಬಾದಾಮಿಯೋ ಎಂದು ಕ್ಷೇತ್ರದ ಬಗ್ಗೆ ಶಾಸಕ ರೇಣುಕಾಚಾರ್ಯ ವ್ಯಂಗ್ಯವಾಡಿದರು.