ದಾವಣಗೆರೆ: ಹೊನ್ನಾಳಿ ಬಿಜೆಪಿ ಶಾಸಕ ಎಂ ಪಿ ರೇಣುಕಾಚಾರ್ಯ ಅವರು ತಮ್ಮ ಮನೆ ಬಳಿ ಜನರನ್ನು ಕರೆಸಿಕೊಂಡು ಮುಂದಿನ ಚುನಾವಣೆಯಲ್ಲಿ ತನಗೇ ಮತ ಹಾಕುವಂತೆ ಆಣೆ, ಪ್ರಮಾಣ ಮಾಡಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಇದಕ್ಕೆ ಸಂಬಂಧಿಸಿದಂತೆ ಇಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಸರ್ಕಾರ ಕೋವಿಡ್ನಿಂದ ಮೃತಪಟ್ಟವರ ಕುಟುಂಬಗಳಿಗೆ ₹1 ಲಕ್ಷ ಕೋವಿಡ್ ಪರಿಹಾರ ನೀಡುತ್ತಿದ್ದು, ಇದರ ಜೊತೆಗೆ ರೇಣುಕಾಚಾರ್ಯ ಅವರು ವೈಯಕ್ತಿಕವಾಗಿ 10 ಸಾವಿರ ರೂ.ಗಳನ್ನು ನೀಡುತ್ತಿದ್ದಾರೆ. ಮನೆಗೆ ಜನರನ್ನು ಕರೆಸಿಕೊಂಡು ಹಣದ ಚೆಕ್ ನೀಡುವ ವೇಳೆ ಮುಂದಿನ ಚುನಾವಣೆಯಲ್ಲಿ ತನಗೇ ಮತ ಹಾಕುವಂತೆ ಜನರಿಂದ ಆಣೆ ಮಾಡಿಸಿಕೊಂಡಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ.
ಆರೋಪಕ್ಕೆ ಸ್ಪಷ್ಟನೆ ನೀಡಿದ ರೇಣುಕಾಚಾರ್ಯ:
ಹಣ ನೀಡಿ ಮುಂದಿನ ಚುನಾವಣೆಯಲ್ಲಿ ಮತ ಹಾಕುವಂತೆ ಜನರಿಂದ ಆಣೆ ಪ್ರಮಾಣ ಮಾಡಿಸಿದ್ದಾರೆ ಎಂಬ ಆರೋಪ ಸಂಬಂಧ ಸ್ವತಃ ಶಾಸಕ ಎಂ.ಪಿ.ರೇಣುಕಾಚಾರ್ಯ ಪ್ರತಿಕ್ರಿಯಿಸಿದ್ದಾರೆ.
'ಮನೆಗೆ ಜನರನ್ನು ಕರೆಸಿಕೊಂಡು ನನಗೆ ಮತ ಹಾಕುವಂತೆ ಕೇಳಿದ್ದೇನೆ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಮಾಧ್ಯಮಗಳ ಮುಂದೆ ಹಾಗೂ ಮನೆಗೆ ಬಂದಂತಹ ಜನರಿಗೆ 2023ರ ಚುನಾವಣೆಯಲ್ಲಿ ಮತ ಕೊಡುತ್ತೀರಾ, ಇಲ್ಲವೋ ಎಂದು ಕೇಳಿದ್ದು ನಿಜ. ಆದರೆ ನನಗೆ ಮತ ಹಾಕುವಂತೆ ಆಣೆ, ಪ್ರಮಾಣ ಮಾಡಿಸಿಕೊಂಡಿಲ್ಲ' ಎಂದು ಹೊನ್ನಾಳಿಯಲ್ಲಿ ಸ್ಪಷ್ಟಪಡಿಸಿದರು.
ಕೋವಿಡ್ನಿಂದ ಮೃತಪಟ್ಟ ಕುಟುಂಬಕ್ಕೆ ವೈಯಕ್ತಿಕವಾಗಿ 10 ಸಾವಿರ ನೀಡುತ್ತಿದ್ದೇನೆ. ಸುಮಾರು 300ಕ್ಕೂ ಅಧಿಕ ಜನರಿಗೆ ಸಹಾಯ ಮಾಡಿದ್ದೇನೆ. ಇದರ ಜೊತೆಗೆ ಮಳೆಯಿಂದ ಹಾನಿ ಉಂಟಾದ ಮನೆ ದುರಸ್ತಿಗೆ ₹1 ಹಣ ನೀಡಿದ್ದೇನೆ. ಶನಿವಾರ ನಮ್ಮ ಮನೆ ಬಳಿ ಬಂದಂತಹ ಜನರಿಗೆ ಪರಿಹಾರದ ಚೆಕ್ ವಿತರಿಸಿ ಕೆಲಸ ಮಾಡುವವರಿಗೆ ಮತ ಹಾಕಿ, ಎಳೆಯುವ ಎತ್ತಿಗೆ ಮೇವು ಹಾಕಿ ಎಂದಿದ್ದು ನಿಜ. ಆದರೆ ಮಾಜಿ ಶಾಸಕ ಶಾಂತನ ಗೌಡ್ರು ಹತಾಶರಾಗಿ ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಪ್ರತ್ಯಾರೋಪ ಮಾಡಿದ್ರು.
ಇದನ್ನೂ ಓದಿ: ಜನ ಸಹಕಾರ ಕೊಟ್ರೆ ಲಾಕ್ಡೌನ್ ಆಗಲ್ಲ.. ಟಫ್ ರೂಲ್ಸ್ ಬಗ್ಗೆ ಸಿಎಂ ಹೇಳಿದ್ದಿಷ್ಟು!