ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನ ದೊಡ್ಡಘಟ್ಟ ಗ್ರಾಮದ ಸರ್ಕಾರಿ ಉರ್ದು ಶಾಲೆಯ ಶಿಕ್ಷಕನ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಶಿಕ್ಷಕ ಅಝ್ಗಾರ್ ಅಲಿ ಖಾನ್ ಶಾಲೆಯ ಶಿಕ್ಷಕಿಯರ ಜತೆಗೆ ಅನುಚಿತ ವರ್ತನೆ ಹಾಗೂ ಮಕ್ಕಳಿಗೆ ಪಾಠ ಮಾಡದೇ ಸುತ್ತಾಡುತ್ತಿದ್ದಾರೆ. ಈ ಹಿನ್ನೆಲೆ ಶಿಕ್ಷಕನನ್ನು ವರ್ಗಾವಣೆಗೆ ಮಾಡಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಶಾಲೆಯ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ವರ್ಗಾವಣೆ ಮಾಡುವಂತೆ ಆಗ್ರಹ: ದೊಡ್ಡಘಟ್ಟ ಗ್ರಾಮದ ಸರ್ಕಾರಿ ಉರ್ದು ಶಾಲೆಯ ಕನ್ನಡ ಶಿಕ್ಷಕ ಅಝ್ಗಾರ್ ಅಲಿ ಖಾನ್ ಪಾಠ ಮಾಡದೇ ಸುತ್ತಾಡುತ್ತಿದ್ದಾರೆ. ಅಲ್ಲದೇ ಸಹ ಶಿಕ್ಷಕಿ ಹಾಗೂ ಮುಖ್ಯ ಶಿಕ್ಷಕಿಯರ ಕೈ ಮುಟ್ಟಿ ಅನುಚಿತವಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಶಿಕ್ಷಕ ಅಝ್ಗಾರ್ ಅಲಿ ಖಾನ್ ಅವರನ್ನು ವರ್ಗಾವಣೆ ಮಾಡಬೇಕು ಎಂದು ದೊಡ್ಡಘಟ್ಟ ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಪಟ್ಟು ಹಿಡಿದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಗ್ರಾಮ ಪಂಚಾಯತ್ ಸದಸ್ಯ ಯುಮಾಯೂನ್, 'ಹಲವು ವರ್ಷಗಳಿಂದ ಈ ರೀತಿ ವರ್ತಿಸುತ್ತಿದ್ದಾರೆ. ಇಲ್ಲಿರುವ ಸಹ ಶಿಕ್ಷಕಿಯರಿಗೆ ಹಾಗೂ ಮುಖ್ಯ ಶಿಕ್ಷಕಿಯರಿಗೆ ಕೈ ಮುಟ್ಟಿ ಅನುಚಿತವಾಗಿ ವರ್ತಿಸುತ್ತಿದ್ದಾರೆ. ಇದರ ಬಗ್ಗೆ ಕೆಲ ವರ್ಷಗಳ ಹಿಂದೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಲಿಲ್ಲ. ಇದೀಗ ಅದೇ ರೀತಿಯ ವರ್ತನೆ ಮುಂದುವರೆದಿದೆ. ಈ ಸಂಬಂಧ ಬಿಇಒ ಕಡೆಯಿಂದ ವರದಿ ಪಡೆದು ಕ್ರಮ ಜರುಗಿಸಲಾಗುವುದು ಎಂದು ಡಿಡಿಪಿಐ ತಿಪ್ಪೇಸ್ವಾಮಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಶಿಕ್ಷಕನ ವಿರುದ್ಧ ಧ್ವನಿ ಎತ್ತಿದ ಗ್ರಾ.ಪಂ ಸದಸ್ಯರು: ಶಿಕ್ಷಕ ಅಝ್ಗಾರ್ ಅಲಿ ಖಾನ್ ವಿರುದ್ಧ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರು ಧ್ವನಿ ಎತ್ತಿದ್ದಾರೆ. ಶಾಲೆಯಲ್ಲಿ ಕಾರ್ಯ ನಿರ್ವಹಿಸುವ ಶಾಲಾ ಶಿಕ್ಷಕಿಯರು ಕೂಡ ಶಿಕ್ಷಕನ ವಿರುದ್ಧ ಅನುಚಿತ ವರ್ತನೆ ಮಾಡಿದ್ದಾರೆಂಬ ಆರೋಪ ಹಿನ್ನೆಲೆ ಶಾಲೆಯ ಬಳಿ ಜಮಾಯಿಸಿದ್ದ ಗ್ರಾಮ ಪಂಚಾಯತ್ ಸದಸ್ಯರು ಪ್ರತಿಭಟನೆ ಮಾಡಿ ಊರಿನ ಮುಖಂಡರನ್ನು ಸೇರಿಸಿ ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ದೂರವಾಣಿ ಮೂಲಕ ಡಿಡಿಪಿಐ ಶಿಕ್ಷಕನ ವಿರುದ್ಧ ಕ್ರಮಕ್ಕೆ ಭರವಸೆ ಸಿಕ್ಕ ತಕ್ಷಣ ಪ್ರತಿಭಟನೆಯಿಂದ ಹಿಂದೆ ಸರಿದರು.
ನನ್ನ ಮೇಲೆ ಸುಳ್ಳು ಆರೋಪ: ಗ್ರಾಮಸ್ಥರ ಆರೋಪ ತಳ್ಳಿಹಾಕಿರುವ ಶಿಕ್ಷಕ ಅಝ್ಗಾರ್ ಅಲಿ ಖಾನ್, "ಶಾಲೆಗೆ ಸೇರಿದ ಜಮೀನಿನ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಗ್ರಾಮದ ಕೆಲವರು ನನ್ನ ವಿರುದ್ಧ ಸಹ ಶಿಕ್ಷಕಿಯರ ಜತೆಗೆ ಅನುಚಿತ ವರ್ತನೆ ಆರೋಪ ಮಾಡಿದ್ದಾರೆ. ನಾನು ಈ ಶಾಲೆಯಲ್ಲಿ ಕಳೆದ 20 ವರ್ಷಗಳಿಂದ ಕನ್ನಡ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಕನ್ನಡ ಭಾಷೆ ಬಗ್ಗೆ ಅರಿವು ಮೂಡಿಸುತ್ತಿದ್ದೇನೆ. ಗ್ರಾ.ಪಂಗೆ ತೆರಳಿ ಈ ಶಾಲೆಗೆ ದಾನ ಮಾಡಿರುವ ಜಾಗದ ಬಗ್ಗೆ ಮಾಹಿತಿಯನ್ನು ಕಲೆಹಾಕಿದ್ದಕ್ಕಾಗಿ ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದ್ದೇನೆ. ಇದರಿಂದ ಶಿಕ್ಷಕಿಯರೊಂದಿಗೆ ಅನುಚಿತ ವರ್ತಿಸಿದ್ದೇನೆ ಎಂದು ಸುಳ್ಳು ಆರೋಪ ಮಾಡಿದ್ದಾರೆ. ನಾನು ಇಲ್ಲಿ ಯಾರಿಗೂ ತೊಂದರೆ ನೀಡಿಲ್ಲ. ಈ ಬಗ್ಗೆ ತನಿಖೆಯಾಗಲಿ'' ಎಂಬುದು ಶಿಕ್ಷಕನ ವಾದ.
ಬಸವಪಟ್ಟಣ ಠಾಣೆಯಲ್ಲಿ ದೂರು.. ಗ್ರಾಮ ಪಂಚಾಯತ್ ಸದಸ್ಯರು ಶಿಕ್ಷಕನ ವಿರುದ್ಧ ಬಸವ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಇದನ್ನೂ ಓದಿ: ದೆಹಲಿ-ಹೈದರಾಬಾದ್ ವಿಮಾನದಲ್ಲಿ ಪ್ರಯಾಣಿಕನ ಅನುಚಿತ ವರ್ತನೆ: ಸ್ಪೈಸ್‌ಜೆಟ್ ಸಿಬ್ಬಂದಿಯೊಂದಿಗೆ ಅಶಿಸ್ತಿನ ನಡವಳಿಕೆ