ದಾವಣಗೆರೆ: ಹೊಸ ಸಾಲ ನೀಡುವ ಕುರಿತಂತೆ ಇನ್ನೆರಡು ದಿನಗಳಲ್ಲಿ ಅಧಿಸೂಚನೆ ಹೊರಡಿಸಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಈಗಾಗಲೇ ಅಧಿಕಾರಿಗಳ ಜೊತೆ ಈ ಕುರಿತು ಚರ್ಚೆ ನಡೆಸಿದ್ದೇನೆ. ಹೊಸ ಸಾಲ ನೀಡುವ ಕುರಿತಂತೆ ಹಾಗೂ ಮತ್ತೆ ಸಾಲ ಪಡೆಯುವವರ ನವೀಕರಣ ಕುರಿತು ಕ್ರಮ ಕೈಗೊಳ್ಳುತ್ತೇವೆ ಎಂದರು.
ಈಗಾಗಲೇ 29 ಲಕ್ಷ 7 ಸಾವಿರ ರೂಪಾಯಿ ಸಾಲ ಮನ್ನಾ ಮಾಡಲಾಗಿದೆ. ಬೇರೆ ಬೇರೆ ಕಾರಣಗಳಿಂದ 1 ಲಕ್ಷ 47 ಸಾವಿರ ಅರ್ಜಿಗಳು ಬಂದಿದ್ದರೂ ಸಾಲ ಮನ್ನಾ ಆಗಿಲ್ಲ. ಈ ಬಗ್ಗೆಯೂ ಮಾಹಿತಿ ಸಂಗ್ರಹಿಸಿ ಸಿಎಂ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಎಪಿಎಂಸಿಗೆ ಬೇರೆ ಬೇರೆ ಕಡೆಗಳಿಂದ ತರಕಾರಿ ಸೇರಿದಂತೆ ಸರಕು ವಾಹನಗಳು ಬರುತ್ತವೆ. ಎಲ್ಲಿಯಾದರೂ ಸಮಸ್ಯೆ ಆಗುತ್ತಿದೆಯಾ ಎಂಬ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇನೆ. ತೊಂದರೆ ಇದ್ದರೆ ಸರಿಪಡಿಸಲಾಗುವುದು. ಎಲೆಕೋಸು ಸೇರಿದಂತೆ ಯಾವುದೇ ತರಕಾರಿ ಬೆಳೆಗಳನ್ನು ರಾಜ್ಯದಲ್ಲಿ ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ಇದಕ್ಕೆ ಯಾವುದೇ ಅಡ್ಡಿ ಇಲ್ಲ ಎಂದು ತಿಳಿಸಿದರು.