ದಾವಣಗೆರೆ: ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ನಟಿ ರಾಗಿಣಿ ದ್ವಿವೇದಿ ಜೊತೆ ಸಿದ್ದರಾಮಯ್ಯ ಇರುವ ಫೋಟೋವನ್ನು ಯಾಕೆ ತೋರಿಸ್ತಿಲ್ಲ ಎಂದು ತೋಟಗಾರಿಕೆ ಸಚಿವ ನಾರಾಯಣಗೌಡ ಪ್ರಶ್ನಿಸಿದ್ದಾರೆ.
ನಗರದ ಡಿಸಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲಾ ಚುನಾವಣೆಯಲ್ಲಿ ಪ್ರಚಾರಕ್ಕೆ ರಾಗಿಣಿ ಹೋಗಿದ್ದರು. ಬೇರೆ ಪಕ್ಷಗಳ ಪರ ಪ್ರಚಾರ ನಡೆಸಿದ್ದು ಯಾಕೆ ತೋರಿಸಲ್ಲ. ಪ್ರತಿಪಕ್ಷದವರು ವಿನಾ ಕಾರಣ ರಾಜಕಾರಣ ಮಾಡುತ್ತಿದ್ದಾರೆ. ವಿಜಯೇಂದ್ರ ಹಾಗೂ ನಾನು ರಾಗಿಣಿ ಜೊತೆ ಇರುವ ಫೋಟೋ ಶೇರ್ ಮಾಡುವುದರ ಹಿಂದೆ ರಾಜಕೀಯ ಕುಮ್ಮಕ್ಕು ಅಡಗಿದೆ. ಉಪ ಚುನಾವಣೆ ನೇತೃತ್ವವನ್ನು ವಿಜಯೇಂದ್ರ ವಹಿಸಿದ್ದರು. ಪ್ರಚಾರಕ್ಕೂ ಬಂದಿದ್ದರು ಎಂದು ಹೇಳಿದರು.
ಬಿಜೆಪಿಗೆ ಮಾತ್ರ ರಾಗಿಣಿ ದ್ವಿವೇದಿ ಸ್ಟಾರ್ ಪ್ರಚಾರಕಿ ಆಗಿರಲಿಲ್ಲ. ಎಲ್ಲಾ ರಾಜಕೀಯ ಪಕ್ಷಗಳ ಪರ ಪ್ರಚಾರ ನಡೆಸಿದ್ದರು. ಕೆ.ಆರ್. ಪೇಟೆಗೆ ಸಿನಿಮಾ ರಂಗದ ಸ್ನೇಹಿತರು ರಾಗಿಣಿಯನ್ನ ಕರೆ ತಂದಿದ್ದರು. ಸ್ನೇಹಿತರ ಮಾತಿಗೆ ಬೆಲೆ ಕೊಟ್ಟು ರಾಗಿಣಿ ನನ್ನ ಪರ ಪ್ರಚಾರಕ್ಕೆ ಬಂದಿದ್ದರು. ಬಿಜೆಪಿ ಪ್ರಚಾರ ನಡೆಸುವಂತೆ ಕರೆದಿರಲಿಲ್ಲ. ಮುಂಬರುವ ದಿನಗಳಲ್ಲಿ ಮತ್ತಷ್ಟು ವಿಷಯ ಹೊರ ಬರಲಿದೆ. ಯಾವ ರಾಜಕಾರಣಿಗಳೇ ಆಗಲಿ ಬಿಡಲ್ಲ, ಎಷ್ಟೇ ದೊಡ್ಡವರಾದರೂ ಬಿಡಲ್ಲ. ನಮ್ಮ ಪಕ್ಷದವರೇ ಇದ್ದರೂ ಸರ್ಕಾರ ಬಿಡದು. ರಾಜ್ಯ ಸರ್ಕಾರ ಡ್ರಗ್ಸ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ ಎಂದರು.
ಪೊಲೀಸರಿಗೆ ನಾವು ಕೊಟ್ಟಷ್ಟು ಫ್ರೀಡಂ ಯಾರೂ ಕೊಟ್ಟಿಲ್ಲ. ಡ್ರಗ್ಸ್ ಇದೊಂದು ದೊಡ್ಡ ಮಾಫಿಯಾ, ಸ್ವಲ್ಪ ದಿನಗಳಲ್ಲಿ ಎಲ್ಲವೂ ಹೊರ ಬರುವ ಸಾಧ್ಯತೆ ಇದೆ ಎಂದು ಭವಿಷ್ಯ ನುಡಿದರು.