ದಾವಣಗೆರೆ: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಈ ವೇಳೆ ಸಚಿವರು ವೃದ್ಧೆ ಕಾಲಿಗೆರಗಿ ನಮಸ್ಕರಿಸುವ ಮೂಲಕ ಗಮನ ಸೆಳೆದರು.
ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ನಗರದ ಶಂಕರ್ ವಿಹಾರ ಬಡಾವಣೆಯಲ್ಲಿ ನೀರು ಬಂದು ಜನರು ಸಂಕಷ್ಟಕ್ಕೀಡಾಗಿದ್ದರು. ಈ ಸ್ಥಳದ ಪರಿಶೀಲನೆಗೆ ಡಿಸಿ ಮಹಾಂತೇಶ್ ಬೀಳಗಿ ನೇತೃತ್ವದ ಅಧಿಕಾರಿಗಳ ತಂಡದ ಜೊತೆ ಈಶ್ವರಪ್ಪ ಆಗಮಿಸಿದ್ದರು.
ವೃದ್ಧೆ ಸುಶೀಲಮ್ಮ ಎಂಬುವರ ಮನೆಯ ಪರಿಸ್ಥಿತಿ ನೋಡಿದ ಈಶ್ವರಪ್ಪ, ಅಜ್ಜಿಗೆ ಸಾಂತ್ವನ ಹೇಳಿದರು. ಅಲ್ಲದೆ ಕೈಮುಗಿದು ನಮಸ್ಕರಿಸಿದರು. ಈ ವೇಳೆ ಅಜ್ಜಿ ಸುಶೀಲಮ್ಮ ತಾವು ಅನುಭವಿಸಿದ ಕಷ್ಟವನ್ನು ಸಚಿವರೆದುರು ತೋಡಿಕೊಂಡ್ರು.
ಸಾಹೆಬ್ರೆ ನಮ್ಮ ಕಷ್ಟ ಹೇಳತೀರದ್ದಾಗಿದೆ. ಇನ್ನು ಯಾವ ಸಹಾಯನೂ ಆಗಿಲ್ಲ. ನಮ್ ಕಡೀನೂ ನೋಡ್ರಿ ಅಂತಾ ವೃದ್ಧೆ ಸುಶೀಲಮ್ಮ ಮನವಿ ಮಾಡಿದರು. ಆಗ ಈಶ್ವರಪ್ಪ ಹೆದರಬೇಡಿ, ನಿಮ್ಮ ಕಷ್ಟಕ್ಕೆ ಸ್ಪಂದಿಸುತ್ತೇವೆ. ಆತಂಕಕ್ಕೆ ಒಳಗಾಗಬೇಡಿ ಎಂದು ಈಶ್ವರಪ್ಪ ಭರವಸೆ ನೀಡಿದರು. ಆಗ ಸ್ಥಳದಲ್ಲಿಯೇ ಇದ್ದ ಜಿಲ್ಲಾಧಿಕಾರಿ ಅವರಿಗೆ ಆದಷ್ಟು ಬೇಗ ಪರಿಹಾರ ನೀಡುವಂತೆ ಸೂಚಿಸಿದರು. ಬಳಿಕ ಈಶ್ವರಪ್ಪ ಅಜ್ಜಿಯ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು.