ದಾವಣಗೆರೆ: ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ದೆಹಲಿಗೆ ತೆರಳಿದ್ದಾರೆ. ಅದರ ಬಗ್ಗೆ ತಪ್ಪಾಗಿ ಅರ್ಥೈಸಬಾರದು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ವದಂತಿಗಳಿಗೆ ತೆರೆ ಎಳೆದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಾಸಕಾಂಗ ಸಭೆ ಕರೆದಿರುವುದರ ಹಿಂದೆ ಯಾವುದೇ ಉದ್ದೇಶ ಇಲ್ಲ. ಶಾಸಕರು ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಹೇಳಿಕೊಳ್ಳಲು ಈ ಸಭೆಯನ್ನು ಸಿಎಂ ಕರೆಯುತ್ತಾರೆ ಎಂದು ಹೇಳಿದ್ರು. ಸಿಎಂ ಬದಲಾವಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು ಯಾವುದೇ ಕಾರಣಕ್ಕೆ ಸಿಎಂ ಬದಲಾವಣೆ ಇಲ್ಲ, ಮಿತ್ರ ಮಂಡಳಿಯ ದೆಹಲಿ ಪ್ರವಾಸ ಊಹಾಪೋಹ, ಯಾವುದೇ ಸಚಿವರು ದೆಹಲಿಗೆ ಹೋಗಿಲ್ಲ. ಹಾಗೇನಾದರೂ ದೆಹಲಿಗೆ ತೆರಳಿದ್ರೂ ನಮ್ಮ ಇಲಾಖೆಯ ಬಗ್ಗೆ ಚರ್ಚಿಸಲು ಮಾತ್ರ ತೆರಳಿದ್ದನ್ನು ಹೊರತುಪಡಿಸಿ ಯಾವುದೇ ಉದ್ದೇಶದಿಂದ ಹೋಗಿಲ್ಲ. ಅದನ್ನು ತಪ್ಪಾಗಿ ಅರ್ಥೈಸುವ ಅಗತ್ಯವಿಲ್ಲ ಎಂದ್ರು.
ಮಾಜಿ ಸಿಎಂ ಕುಮಾರಸ್ವಾಮಿಯವರ ಸೂಟ್‌ಕೇಸ್ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಸೂಟ್‌ಕೇಸ್ ಬಗ್ಗೆ ಯಾವ ದೃಷ್ಟಿಯಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಪ್ರವಾಸಕ್ಕೆ ಹೋದಾಗ ಸೂಟ್‌ಕೇಸ್ ಒಯ್ಯೋದು ಕಾಮನ್. ಸೂಟ್‌ಕೇಸ್‌ನಲ್ಲಿ ಬಟ್ಟೆಬರೆ ಒಯ್ತಾರೆ ಅಷ್ಟೇ ಎಂದು ಸಚಿವ ಭೈರತಿ ಸಮರ್ಥನೆ ನೀಡಿದರು.