ದಾವಣಗೆರೆ : ತಾಲೂಕಿನ ಹೆಬ್ಬಾಳು ಗ್ರಾಮದಲ್ಲಿ ನೊಣಗಳ ಹಾವಳಿಗೆ ಜನ ರೋಸಿ ಹೋಗಿದ್ದಾರೆ. ಗ್ರಾಮದ ಕೂಗಳತೆಯಲ್ಲಿರುವ ಕೋಳಿ ಫಾರಂಗಳಿಂದ ಹೊರ ಬರುತ್ತಿರುವ ವಿಷಪೂರಿತ ನೊಣಗಳು ನೇರವಾಗಿ ಜನರ ಆರೋಗ್ಯದ ಮೇಲೆ ದಾಳಿ ಮಾಡ್ತಿವೆ. ಇದಲ್ಲದೆ ಮನೆಗಳಲ್ಲೂ ಕೂಡ ನೊಣಗಳ ಹಾವಳಿ ಹೆಚ್ಚಾಗಿದ್ದು, ಅಡುಗೆ ಮಾಡಲು ಆಗದೆ ಗೃಹಿಣಿಯರು ಕೂಡ ಹೈರಾಣಾಗಿದ್ದಾರೆ.
ಮನೆ, ಅಂಗಡಿ, ಹೋಟೆಲ್ ಹೀಗೆ ಎಲ್ಲೆಂದರಲ್ಲಿ ನೊಣಗಳು ಕೂರುವ ಮೂಲಕ ಜನರಲ್ಲಿ ಆತಂಕ ಸೃಷ್ಟಿ ಮಾಡಿವೆ. ಮಳೆ ಯಾವಾಗ ಹೆಚ್ಚಾಗುತ್ತೋ ಅಂದು ನೊಣಗಳು ಇಡೀ ಗ್ರಾಮದಲ್ಲಿ ಹೆಚ್ಚಾಗುತ್ತವೆ. ಇದರಿಂದ ರೋಸಿ ಹೋದ ಗ್ರಾಮಸ್ಥರು ಸಾಕಷ್ಟು ಬಾರಿ ಜಿಲ್ಲಾಡಳಿತದ ಗಮನಕ್ಕೆ ತಂದ್ರೂ ಕೂಡ ಯಾವುದೇ ಪ್ರಯೋಜನ ಆಗಿಲ್ಲವಂತೆ.
ಮನೆಗಳಲ್ಲಿ ಹಣ್ಣು-ಹಂಪಲು ಹೆಚ್ಚಿದ್ರೆ ಅಲ್ಲಿ ನೊಣಗಳು ದಾಳಿ ಇಡುವುದು ಕಟ್ಟಿಟ್ಟ ಬುತ್ತಿ. ಇದಲ್ಲದೆ ಗ್ರಾಮದಲ್ಲಿರುವ ಹೋಟೆಲ್ಗಳಲ್ಲಿ ಟೀ ಮಾಡುವ ಸ್ಥಳದಲ್ಲೂ ಕೂಡ ನೊಣಗಳ ಹಾವಳಿಯಿಂದ ಹೋಟೆಲ್ ಮಾಲೀಕರು ಹೈರಾಣಾಗಿದ್ದಾರೆ. ಇದರಿಂದ ಮಕ್ಕಳು ಜೀವ ಕೈಯಲ್ಲಿ ಹಿಡಿದು ಜೀವನ ನಡೆಸುವ ಪರಿಸ್ಥಿತಿ ನಿರ್ಮಾಣ ಆಗಿದೆ.
ಆತಂಕಕ್ಕೆ ಸಿಲುಕಿದ ಗ್ರಾಮಸ್ಥರು.. ಹೆಬ್ಬಾಳು ಗ್ರಾಮದಲ್ಲಿ ನೊಣಗಳ ಹಾವಳಿ ಹೆಚ್ಚಾಗಿದ್ದರಿಂದ ಇಡೀ ಗ್ರಾಮಸ್ಥರು ಆತಂಕಕ್ಕೆ ಸಿಲುಕಿದ್ದಾರೆ. ಗೃಹಿಣಿಯರು ಅಡುಗೆ ಮಾಡಲು ಬೇಸತ್ತು ಹೋಗಿದ್ದಾರೆ. ವಿವಿಧ ರೋಗಗಳು ಸೃಷ್ಟಿಯಾಗಿ ದುರಂತ ನಡೆಯುವ ಮುನ್ನ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಬೇಕಾಗಿದೆ ಎಂಬುದು ಈ ಗ್ರಾಮಸ್ಥರ ಒತ್ತಾಯವಾಗಿದೆ.
ಓದಿ: ಬಿಜೆಪಿಯ ವಿರುದ್ಧ ರಾಜ್ಯಾದ್ಯಂತ ಕಾಂಗ್ರೆಸ್ ಪ್ರತಿಭಟನೆ : ಕಾರ್ಯಕರ್ತರುಗಳ ಬಂಧನ