ದಾವಣಗೆರೆ: ನೊಣಗಳ ಉಪಟಳದಿಂದ ಬೇಸತ್ತಿರುವ ದಾವಣಗೆರೆ ತಾಲೂಕಿನ ಹತ್ತೂರು ಗ್ರಾಮಕ್ಕೆ ತಕ್ಕಮಟ್ಟಿಗೆ ಮುಕ್ತಿ ಸಿಕ್ಕಂತಾಗಿದೆ. 'ದಾವಣಗೆರೆಯ ಗ್ರಾಮಗಳಲ್ಲಿ ಹೆಚ್ಚಾಯಿತು ನೊಣಗಳ ಉಪಟಳ ಆತಂಕದಲ್ಲಿ ಜನ' ಶೀರ್ಷಿಕೆಯಡಿಯಲ್ಲಿ ಈಟಿವಿ ಭಾರತ್ ಜುಲೈ 29 ರಂದು ವರದಿ ಮಾಡಿತ್ತು. ಸುದ್ದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಹೆಬ್ಬಾಳು ಗ್ರಾಮ ಪಂಚಾಯತಿ ಸಿಬ್ಬಂದಿ ನೊಣಗಳ ಸಮಸ್ಯೆಗೆ ಮುಕ್ತಿ ನೀಡಲು ಗ್ರಾಮಗಳಿಗೆ ಭಾನುವಾರ ಔಷಧಿ ಸಿಂಪಡಣೆ ಮಾಡಿದ್ದಾರೆ.
ಔಷಧಿ ಸಿಂಪಡಣೆ ಮಾಡಿದ್ರೆ ಕೆಲ ಹೊತ್ತು ಮಾತ್ರ ನೊಣಗಳ ಕಾಟ ದೂರವಾಗ್ಬಹುದು. ಆದರೆ ಈ ಸಮಸ್ಯೆಗೆ ಶಾಶ್ವತ ಮುಕ್ತಿ ಕಲ್ಪಿಸಬೇಕಾಗಿದೆ ಎಂಬುದು ಗ್ರಾಮಸ್ಥರ ಕೂಗಾಗಿದೆ. ಈ ಸಮಸ್ಯೆ ಬಗ್ಗೆ ಸುದ್ದಿ ಮಾಡಿದ್ದ ಈಟಿವಿ ಭಾರತ್ ವರದಿಗೆ ಗ್ರಾಮಸ್ಥರು ಧನ್ಯವಾದ ತಿಳಿಸಿದ್ದಾರೆ. ದಾವಣಗೆರೆ ತಾಲೂಕಿನ ಹತ್ತಕ್ಕೂ ಹೆಚ್ಚು ಗ್ರಾಮಗಳಲ್ಲಿ ನೊಣಗಳ ಹಾವಳಿ ಮಿತಿಮೀರಿತ್ತು. ದಿನ ಬೆಳಗಾದ್ರೆ ಈ ಕೋಳಿ ಫಾರಂಗಳಿಂದ ನೇರವಾಗಿ ಗ್ರಾಮಗಳಿಗೆ ರಾಶಿ ರಾಶಿ ನೊಣಗಳು ದಾಂಗುಡಿ ಇಡುತ್ತಿದ್ದವು. ಇದರಿಂದ ರೋಗರುಜಿನಗಳು ಬರಬಹುದೆಂದು ಇಡೀ ಹತ್ತೂರಿನ ಜನರು ಆತಂಕದಲ್ಲೇ ಕಾಲಕಳೆಯುತ್ತಿದ್ದರು. ಆದ್ರೇ ಇದೀಗ ಔಷಧಿ ಸಿಂಪಡಣೆ ಮಾಡಿದ್ದರಿಂದ ತಕ್ಕಮಟ್ಟಿಗೆ ಆತಂಕ ದೂರವಾಗಿದೆ.
ದಾವಣಗೆರೆ ತಾಲೂಕಿನ ಹೆಬ್ಬಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹುಣಸೆಕಟ್ಟೆ, ಮಂಡ್ಲೂರು, ಹೆಬ್ಬಾಳು, ಲಕ್ಕಮುತ್ತೇನ ಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರ ಬದುಕು ನೊಣಗಳ ಕಾಟದಿಂದ ಅಯೋಮಯವಾಗಿತ್ತು. ಹೆಬ್ಬಾಳು ಗ್ರಾಪಂ ವ್ಯಾಪ್ತಿಯಲ್ಲಿ ಏಳಕ್ಕೂ ಹೆಚ್ಚು ಕೋಳಿ ಫಾರಂ ಗಳಿದ್ದು, ಅಲ್ಲಿ ಕೋಳಿ ಸಾಕಾಣಿಕೆ ಮಾಡಲಾಗುತ್ತಿದ್ದರಿಂದ ಈ ನೊಣಗಳ ಸಮಸ್ಯೆ ಉಲ್ಬಣವಾಗಿದೆ. ನೊಣಗಳ ಬಗ್ಗೆ ವಿಸ್ತೃತವಾಗಿ ಸುದ್ದಿ ಮಾಡಲಾಗಿತ್ತು. ಈಟಿವಿ ಭಾರತ ವರದಿಯಿಂದ ಎಚ್ಚೆತ್ತುಕೊಂಡ ಹೆಬ್ಬಾಳು ಗ್ರಾ.ಪಂ ಸಿಬ್ಬಂದಿ ಟ್ಯಾಂಕರ್ ನಲ್ಲಿ ಔಷಧಿ ತರಿಸಿ ಹುಣಸೆಕಟ್ಟೆ, ಲಕ್ಕ ಮುತ್ತೇನಹಳ್ಳಿ ಮತ್ತು ನೀರ್ಥಡಿ ಗ್ರಾಮದಲ್ಲಿ ಔಷಧಿ ಸಿಂಪಡಣೆ ಮಾಡುತ್ತಿರುವುದರಿಂದ ಜನ ಈಟಿವಿ ಭಾರತ್ಗೆ ಧನ್ಯವಾದ ಹೇಳಿದ್ದಾರೆ.
ತಾತ್ಕಾಲಿಕ ಪರಿಹಾರವಾಗಿದೆ: ಈ ವೇಳೆ ಮಾತನಾಡಿದ ಹೆಬ್ಬಾಳು ಗ್ರಾಮಸ್ಥ ವಿಜಯ್ ಅವರು, ನೊಣಗಳ ಸಮಸ್ಯೆ ಬಗ್ಗೆ ಸುದ್ದಿ ಪ್ರಕಟ ಮಾಡಿ ನಮ್ಮ ನೆರವಿಗೆ ನಿಂತ ಈಟಿವಿ ಭಾರತ್ಗೆ ಧನ್ಯವಾದಗಳು. ವರದಿ ಮಾಡಿದ ಬೆನ್ನಲ್ಲೇ ಹೆಬ್ಬಾಳು ಗ್ರಾಪಂ ಸಿಬ್ಬಂದಿ ನೀರ್ಥಡಿ, ಲಕ್ಕಮುಕ್ತೆನ ಹಳ್ಳಿ, ಹುಣಸೆಕಟ್ಟೆ ಗ್ರಾಮಗಳಲ್ಲಿ ಔಷಧಿ ಸಿಂಪಡಣೆ ಮಾಡಲಾಗಿದೆ. ನಾಳೆ ಹೆಬ್ಬಾಳು, ಹಾಲುವರ್ತಿ, ಹೆಬ್ಬಾಳು ಬಡಾವಣೆ, ಮಂಡ್ಲೂರು, ಹಾಲುವರ್ತಿ ಬಡಾವಣೆ ಗ್ರಾಮಗಳಿಗೆ ಔಷಧಿ ಸಿಂಪಡಣೆ ಮಾಡಲಾಗುತ್ತದೆ. ಔಷಧಿ ಸಿಂಪಡಣೆ ಮಾಡಿರುವುದು ತಾತ್ಕಾಲಿಕ ಪರಿಹಾರವಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವಂತೆ 'ಈಟಿವಿ ಭಾರತ' ನಿಂದ ಹೆಚ್ಚು ಸುದ್ದಿ ಮಾಡುವ ಮೂಲಕ ಸಮಸ್ಯೆಗೆ ಮುಕ್ತಿ ಕೊಡಿಸಿ, ನಮ್ಮ ಧ್ವನಿಯಾಗಿ ನಿಲ್ಲಿ ಎಂದು ಮನವಿ ಮಾಡಿದ್ದಾರೆ.
ಈಟಿವಿ ಭಾರತ ವರದಿ ಸ್ಪಂದಿಸಿ ಕ್ರಮ ಕೈಗೊಂಡಿರುವ ಗ್ರಾಮ ಪಂಚಾಯತ್ ಸಿಬ್ಬಂದಿಗಳಿಗೆ ಧನ್ಯವಾದ ತಿಳಿಸುತ್ತೇವೆ. ಹಾಗೆಯೇ ಈ ಊರಿನ ಜನರಿಗೆ ಶಾಶ್ವತವಾಗಿ ಸಮಸ್ಯೆಯನ್ನು ದೂರ ಮಾಡಿ, ಅವರ ಆರೋಗ್ಯ ಕಾಪಾಡಲಿ ಎಂದು ಒತ್ತಾಯಿಸುತ್ತೇವೆ.
ಇದನ್ನೂ ಓದಿ: ಪ್ರವಾಸಿಗರ ಮೇಲೆ ಮುಗಿಬಿದ್ದ ಜೇನುನೊಣಗಳು; ಇಬ್ಬರು ಸಾವು, ಐವರಿಗೆ ಗಾಯ