ದಾವಣಗೆರೆ: ಡೆತ್ ನೋಟ್ ಬರೆದಿಟ್ಟು ಕೋವಿಡ್ ವಾರಿಯರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಮಾಯಕೊಂಡದ ಹುಚ್ಚವನಹಳ್ಳಿಯಲ್ಲಿ ನಡೆದಿದೆ.
ಸರ್ಕಾರಿ ಆಸ್ಪತ್ರೆಯ ಸ್ಟಾಫ್ ನರ್ಸ್ ರಂಗಸ್ವಾಮಿ (30) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. "ನಾನು ನಕಲಿ ವೈದ್ಯನಲ್ಲ, ನಿತ್ಯ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದೇನೆ. ಎಂಎಸ್ಸಿ ನರ್ಸಿಂಗ್ ಪದವಿ ಓದಿದ್ದೇನೆ. ಕೊರೊನಾ ವಾರಿಯರ್ ಆಗಿ ಕೆಲಸ ಮಾಡುತ್ತಿರುವ ನನ್ನನ್ನು ಸನ್ಮಾನಿಸಬೇಕಿತ್ತು. ಅದು ಬಿಟ್ಟು ಕ್ರಿಮಿನಲ್ ಕೇಸ್ ಹಾಕುವುದಾಗಿ ಹೇಳಿಕೆ ನೀಡಿರುವುದು ಬೇಸರ ತಂದಿದೆ" ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿಯವರಿಗೆ ಆತ್ಮಹತ್ಯೆಗೂ ಮುನ್ನ ರಂಗಸ್ವಾಮಿ ಪತ್ರ ಬರೆದಿಟ್ಟಿದ್ದಾರೆ.
ಹುಚ್ಚವನಹಳ್ಳಿ ಗ್ರಾಮದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿದ್ದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸೋಮವಾರ ಸಂಜೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ನರ್ಸ್ ರಂಗಸ್ವಾಮಿ ಗ್ರಾಮದಲ್ಲಿ ಚಿಕಿತ್ಸೆ ನೀಡುತ್ತಿರುವ ಬಗ್ಗೆ ಸ್ಥಳೀಯರಿಂದ ಮಾಹಿತಿ ಕಲೆ ಹಾಕಿದ್ದು, ರಂಗಸ್ವಾಮಿ ನಡೆಸುತ್ತಿದ್ದ ಕ್ಲಿನಿಕ್ ಮೇಲೆ ದಾಳಿ ನಡೆಸಿ ಕ್ರಿಮಿನಲ್ ಕೇಸ್ ಹಾಕುವ ಎಚ್ಚರಿಕೆ ನೀಡಿದ್ದರು. ಇದರಿಂದ ಬೇಸತ್ತ ರಂಗಸ್ವಾಮಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗ್ತಿದೆ.
ಈ ಸಂಬಂಧ ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.