ದಾವಣಗೆರೆ : ಜನರ ಕಷ್ಟ ಅರಿತು ಪಾಸ್ ನೀಡಿದ್ದೇವೆಯೇ ಹೊರತು ದುರುದ್ದೇಶದಿಂದ ವಿತರಿಸಿಲ್ಲ. ಈ ಪಾಸ್‌ಗಳ ದುರ್ಬಳಕೆಯಾಗಿಲ್ಲ ಎಂದು ಮಹಾನಗರ ಪಾಲಿಕೆ ಮೇಯರ್ ಬಿ ಜಿ ಅಜಯ್‌ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಡಳಿತದಿಂದ ಪಾಲಿಕೆಗೆ ನೀಡಿರುವುದು ಕೇವಲ 700 ಪಾಸ್‌ಗಳು ಮಾತ್ರ. ನಗರದಲ್ಲಿ 45 ವಾರ್ಡ್ಗಳಿವೆ. ಅವಶ್ಯಕ ಓಡಾಟಕ್ಕೆ ಹೆಚ್ಚಿನ ಬೇಡಿಕೆ ಇತ್ತು. ಮೇಯರ್ ಆಗಿ ಒಂದು ಪಾಸ್ ಕೊಡಿಸಲು ಆಗಲ್ವಾ ಎಂದು ಜನರೇ ಪ್ರಶ್ನೆ ಮಾಡಲು ಶುರು ಮಾಡಿದರು. ಹಾಗಾಗಿ 250 ಪಾಸ್‌ಗಳನ್ನು ಪಾಲಿಕೆ ವತಿಯಿಂದ ಎಲ್ಲಾ ದಾಖಲಾತಿ ಪಡೆದು ವಿತರಿಸಲಾಗಿದೆ ಎಂದು ಹೇಳಿದರು.
ನಾವೇನೂ ಐದು ಸಾವಿರ, ಹತ್ತು ಸಾವಿರ ಪಾಸ್‌ಗಳನ್ನು ಪ್ರಿಂಟ್ ಮಾಡಿ ಕೊಟ್ಟಿಲ್ಲ. ಅಂಗಡಿಗಳ ಮಾಲೀಕರಿಗೆ ನೀಡಿದ್ದೇವೆ. ಯಾವ ನಕಲಿ ಪಾಸ್ಗಳನ್ನೂ ನೀಡಿಲ್ಲ. ಆದರೂ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ. ಒತ್ತಡ ಹೆಚ್ಚಿದ ಕಾರಣ ನಾವು ಬೇಡಿಕೆಯಿಟ್ಟು ನಾಲ್ಕೈದು ದಿನ ಕಳೆದರೂ ಪಾಸ್ ನೀಡದ ಕಾರಣ ಈ ಕ್ರಮಕೈಗೊಳ್ಳಬೇಕಾಯಿತು ಎಂದು ಮೇಯರ್ ಹೇಳಿದರು.