ದಾವಣಗೆರೆ: ಪಾಲಕರನ್ನು ಕಳೆದುಕೊಂಡಿದ್ದ ಅನಾಥ ಐದು ಮಕ್ಕಳ ಪೈಕಿ ಇಬ್ಬರು ಅಪ್ರಾಪ್ತೆಯರಿಗೆ ಆಮಿಷವೊಡ್ಡಿ ದುರುಳರಿಬ್ಬರು ಮದುವೆಯಾಗಿರುವ ಘಟನೆ ದಾವಣಗೆರೆ ನಗರದ ಬಡಾವಣೆಯೊಂದರಲ್ಲಿ ನಡೆದಿದೆ. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
2 ವರ್ಷದ ಹಿಂದೆ ಬಾಲಕಿಯರ ತಂದೆ ಮೃತಪಟ್ಟಿದ್ದರೆ, ಐದು ತಿಂಗಳ ಹಿಂದೆ ತಾಯಿ ಕೋವಿಡ್ಗೆ ಬಲಿಯಾಗಿದ್ದಾರೆ. ತಂದೆ-ತಾಯಿ ಕಳೆದುಕೊಂಡ ನಾಲ್ವರು ಹೆಣ್ಮಕ್ಕಳು ಹಾಗೂ ಒಂದು ಗಂಡು ಮಗು ಸೇರಿ ಒಟ್ಟು ಐವರು ಜೀವನ ಸಾಗಿಸುವುದಕ್ಕೆ ಪರಿಪಾಟಲು ಪಡುತ್ತಿದ್ದರು. ಸಮಯಸಾಧಿಸಿದ ಇಬ್ಬರು, ಮೂರು ತಿಂಗಳ ಹಿಂದೆ 15 ವರ್ಷ ಹಾಗೂ 13 ವರ್ಷದ ಅಪ್ರಾಪ್ತೆಯರನ್ನು ವಿವಾಹವಾಗಿದ್ದಾರೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು 13 ವರ್ಷದ ಬಾಲಕಿಯನ್ನು ಮದುವೆಯಾಗಿದ್ದವನನ್ನು ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ. ಆದರೆ, ಅಧಿಕಾರಿಗಳು ವಿಚಾರಣೆ ನಡೆಸಬೇಕಾದರೆ, ಆರೋಪಿಯು ಎಸ್ಕೇಪ್ ಆಗಿದ್ದಾನೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ವರದಕ್ಷಿಣೆ ಕೊಟ್ಟಿಲ್ಲ ಅಂತ ಪತ್ನಿಯನ್ನೇ ವೇಶ್ಯೆಯಂತೆ ಬಿಂಬಿಸಿದ ಭೂಪ..!
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಕೆ.ಹೆಚ್. ವಿಜಯಕುಮಾರ್, ಐದು ಮಕ್ಕಳನ್ನು ವಶಕ್ಕೆ ಪಡೆದು, ಜಿಲ್ಲಾ ಬಾಲಕಿಯರ ಮಂದಿರದ ಸುಪರ್ದಿಗೆ ಒಪ್ಪಿಸಿದ್ದಾರೆ. ಅಪ್ರಾಪ್ತೆಯರಿಗೆ ವಂಚಿಸಿ ಮದುವೆಯಾಗಿರುವ ಇಬ್ಬರ ವಿರುದ್ಧ ಪೋಕ್ಸೊ ಕಾಯ್ದೆಯಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಲೆ ಮರೆಸಿಕೊಂಡಿರುವ ಇಬ್ಬರು ಆರೋಪಿಗಳಿಗಾಗಿ ಖಾಕಿ ಪಡೆ ಬಲೆ ಬೀಸಿದೆ.