ದಾವಣಗೆರೆ: ಕೋಣ ತಿವಿದು ವ್ಯಕ್ತಿ ಪ್ರಾಣ ಕಳೆದುಕೊಂಡ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಎನ್. ಬಸವನಹಳ್ಳಿ ಗ್ರಾಮದಲ್ಲಿ ನಡೆದಿದೆ. ಎನ್. ಬಸವನಹಳ್ಳಿ ಗ್ರಾಮದ ನಿವಾಸಿ ನೀರಗಂಟಿ ಜಯಣ್ಣ (48) ಸಾವಿಗೀಡಾದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಲಿಂಗದಹಳ್ಳಿಯ ಗ್ರಾಮಸ್ಥರು ಉಡುಸಲಾಂಭ ದೇವಿಗೆ ಕೋಣ ಬಿಟ್ಟಿದ್ದರು. ಲಿಂಗದಹಳ್ಳಿಯಿಂದ ಬಸವನಹಳ್ಳಿಗೆ ಬರುತ್ತಿದ್ದ ಕೋಣ ಇಲ್ಲಿಯ ಎಮ್ಮೆಗಳ ಜೊತೆ ಸೇರಿ ದಾಂಧಲೆ ಮಾಡುತಿತ್ತು. ಈ ಹಿನ್ನೆಲೆಯಲ್ಲಿ ಬಸವನಹಳ್ಳಿ ಗ್ರಾಮದ ಜಯಣ್ಣ ಕೋಣ ಓಡಿಸುತ್ತಿದ್ದರು. ಈ ಹಿಂದೆ ಇದೇ ಕೋಣ ಜಯಣ್ಣನ ಮೇಲೆ ಮೂರ್ನಾಲ್ಕು ಬಾರಿ ದಾಳಿ ಮಾಡಿತ್ತಂತೆ. ಆದರೆ ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು ಎಂದು ತಿಳಿದು ಬಂದಿದೆ.
ಭಾನುವಾರ ಸಂಜೆ ಜಯಣ್ಣನ ಮೇಲೆ ದಾಳಿ ಮಾಡಿದ ಕೋಣ ತಿವಿದು ಕೊಂದು ಹಾಕಿದೆ. ಎನ್. ಬಸವನಹಳ್ಳಿ ಗ್ರಾಮಸ್ಥರು ಕೋಣ ಕಟ್ಟಿ ಹಾಕಿ ಸಾವಿಗೆ ನ್ಯಾಯ ದೊರಕಿಸಿಕೊಡಿ ಎಂದು ಶವ ಇಟ್ಟು ಪ್ರತಿಭಟನೆ ನಡೆಸಿದ್ದಾರೆ. ಮೃತ ಜಯಣ್ಣನ ಪುತ್ರ ದೂರು ನೀಡಿದ ಬೆನ್ನಲ್ಲೇ ಪ್ರಕರಣ ದಾಖಲಿಸಿಕೊಂಡಿರುವ ಚನ್ನಗಿರಿ ಪೊಲೀಸರು ಕೋಣವನ್ನು ವಶಕ್ಕೆ ಪಡೆದು ಸ್ಥಳಾಂತರ ಮಾಡಲು ಮುಂದಾಗಿದ್ದಾರೆ.
ಈಗಾಗಲೇ ಏಳೆಂಟು ಜನರ ಮೇಲೆ ದಾಳಿ ಮಾಡಿದ್ದು ಲಿಂಗದಹಳ್ಳಿ ಗ್ರಾಮ ಪಂಚಾಯತಿಯ ಪಿಡಿಓ ಮಲಿಕ್ ದೇವಸ್ಥಾನದ ಕಮಿಟಿಯ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಇದರಿಂದ ಎನ್. ಬಸವನಹಳ್ಳಿ ಗ್ರಾಮಸ್ಥರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ಇದರ ಬಗ್ಗೆ ಅಧಿಕಾರಿಗಳು ಮತ್ತು ಲಿಂಗದಹಳ್ಳಿ ಗ್ರಾಮಸ್ಥರು ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಕೋಣನ ದಾಳಿಗೆ ಜಯಣ್ಣನವರು ಬಲಿಯಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ.
ಗ್ರಾಮಸ್ಥ ಲಂಕೇಶ್ ಮಾತನಾಡಿ, ಮೂರು ವರ್ಷದಿಂದ ಕೋಣದ ಕಾಟ ಇದೆ, ತೋಟ ಹಾಳು ಮಾಡುವುದು, ಜನರ ಮೇಲೆ ದಾಳಿ ಮಾಡುತ್ತಿತ್ತು. ಲಿಂಗದಹಳ್ಳಿಯ ಉಡುಸಲಾಂಭ ದೇವಿಗೆ ಈ ಕೋಣ ಬಿಟ್ಟಿದ್ದು, ಪುಂಡಾಟಿಕೆಯ ಬಗ್ಗೆ ದೇವಸ್ಥಾನದ ಕಮಿಟಿಯ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಜಯಣ್ಣ ಕೋಣವನ್ನು ತಮ್ಮ ಎಮ್ಮೆಗಳ ಜೊತೆ ಸೇರಲು ಬಿಡುತ್ತಿರಲಿಲ್ಲ. ನಿನ್ನೆ ಸಂಜೆ ಜಯಣ್ಣ ತೋಟದಿಂದ ಎಮ್ಮೆಗಳನ್ನು ಮನೆಗೆ ಕರೆದುಕೊಂಡು ಹೋಗುವಾಗ ಕೋಣ ಅವರ ಮೇಲೆ ದಾಳಿ ಮಾಡಿ ಸಾಯಿಸಿದೆ. ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಪ್ರಾಣಿ ದಾಳಿ ಮಾಡಿದರೆ ಅದರ ಮೇಲೆ ಕ್ರಮ ಕೈಗೊಳ್ಳಲು ಯಾವುದೇ ಕಾನೂನು ಇಲ್ಲ ಎಂದು ಕಳುಹಿಸಿದರು ಎಂದರು.
ಗ್ರಾಮಸ್ಥ ದುರ್ಗೇಶ್ ನಾಯ್ಕ್ ಮಾತನಾಡಿ, ಈಗಾಗಲೇ ಪೊಲೀಸರ ಸಮ್ಮುಖದಲ್ಲಿ ಕೋಣವನ್ನು ಹಿಡಿದು ಕಟ್ಟಿಹಾಕಿದ್ದೇವೆ. ಜಯಣ್ಣನ ಸಾವಿಗೆ ನ್ಯಾಯ ಸಿಗಬೇಕಾಗಿದೆ. ಕೋಣದ ಪುಂಡಾಟಿಕೆಗೆ ಬ್ರೇಕ್ ಹಾಕುವಂತೆ ಕಮಿಟಿಯವರ ಗಮನಕ್ಕೆ ತಂದಿದ್ವೆ. ಅದ್ರೆ ಪ್ರಯೋಜನ ಆಗಿರಲಿಲ್ಲ. ಇದೀಗ ಪ್ರಕರಣ ದಾಖಲಿಸಿಕೊಂಡ ಚನ್ನಗಿರಿ ಪೊಲೀಸರು ಕೋಣವನ್ನು ವಶಕ್ಕೆ ಪಡೆದಿದ್ದಾರೆಂದು ತಿಳಿಸಿದರು.
ಇದನ್ನೂ ಓದಿ: Snake bites a couple: ಮನೆಯಲ್ಲಿ ಮಲಗಿದ್ದ ದಂಪತಿಗೆ ಕಚ್ಚಿದ ನಾಗರಹಾವು - ಪತಿ ಸಾವು, ಪತ್ನಿ ಸ್ಥಿತಿ ಗಂಭೀರ