ದಾವಣಗೆರೆ: ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಸೇತುವೆ ಮೇಲಿಂದ ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾದ ಘಟನೆ ದಾವಣಗೆರೆ ತಾಲೂಕಿನ ತೋಳಹುಣಸೆ ಬಳಿಯ ಫ್ಲೈಓವರ್ ಬಳಿ ತಡರಾತ್ರಿ ನಡೆದಿದೆ. ಹರೀಶ್ ಹಳ್ಳಿ (34) ಮೃತರು. ಪ್ರಕರಣವೊಂದರಲ್ಲಿ ಬೇಕಾಗಿದ್ದ ಹರೀಶ್ ಹಳ್ಳಿ ಅವರನ್ನು ಪೊಲೀಸರು ವಶಕ್ಕೆ ಪಡೆದು ಜೀಪ್ನಲ್ಲಿ ದಾವಣಗೆರೆ ತೋಳಹುಣಸೆ ಬಳಿಯ ಸೇತುವೆ ಮೂಲಕ ಕರೆತರುತ್ತಿದ್ದರು. ರಾತ್ರಿ 2.30ರ ಸುಮಾರಿಗೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಫ್ಲೈಓವರ್ ಮೇಲಿಂದ ಹರೀಶ್ ಹಾರಿದ್ದಾರೆ ಎಂದು ಹೇಳಲಾಗಿದೆ. ಇದರಿಂದ ತೀವ್ರ ಗಾಯಗೊಂಡಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಮಾಹಿತಿ ಹಕ್ಕು ಹೋರಾಟಗಾರ: ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕಬ್ಬಳ ಗ್ರಾಮದ ನಿವಾಸಿಯಾಗಿರುವ ಹರೀಶ್ ಮಾಹಿತಿ ಹಕ್ಕು ಹೋರಾಟಗಾರ. ನಕಲಿ ದಾಖಲೆ ಸೃಷ್ಠಿಸಿ ಬೇರೊಬ್ಬರ ಸೈಟ್ ತಮ್ಮ ಹೆಸರಿಗೆ ಮಾಡಿಕೊಂಡ ಆರೋಪ ಎದುರಿಸುತ್ತಿದ್ದ ಹರೀಶ್ ಹಳ್ಳಿಯನ್ನು ಅವರ ಪತ್ನಿಯ ಊರಾದ ಚನ್ನಗಿರಿ ಕಾಕನೂರ ಗ್ರಾಮದಿಂದ ಪೊಲೀಸರು ಶನಿವಾರ ಕರೆತರುವಾಗ ಘಟನೆ ನಡೆದಿದೆ.
ಆಸ್ಪತ್ರೆಯೆದುರು ಜಮಾಯಿಸಿದ ಕುಟುಂಬ ಸದಸ್ಯರು, ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಪೊಲೀಸರೇ ತನ್ನ ಗಂಡನನ್ನು ಕೊಲೆ ಮಾಡಿದ್ದಾರೆಂದು ಎಸ್ಐ ಹಾಗೂ ಇಬ್ಬರು ಕಾನ್ಸ್ಟೇಬಲ್ಗಳ ವಿರುದ್ದ ಹರೀಶ್ ಹಳ್ಳಿ ಪತ್ನಿ ದೂರು ನೀಡಿದ್ದಾರೆ. ಪ್ರಕರಣದ ವಿಚಾರವಾಗಿ ತನ್ನ ಪತಿಯನ್ನು ಕರೆದುಕೊಂಡು ಹೋಗಿದ್ದು, ಅವರ ಸಾವಿಗೆ ಗಾಂಧಿನಗರ ಪೊಲೀಸ್ ಠಾಣೆಯ ಎಸ್ಐ ಹಾಗೂ ಇಬ್ಬರು ಕಾನ್ಸ್ಟೇಬಲ್ ಕಾರಣ ಎಂದು ದೂರು ದಾಖಲಿಸಿದ್ದಾರೆ. ಘಟನಾ ಸ್ಥಳಕ್ಕೆ ದಾವಣಗೆರೆ ಎಸ್ಪಿ ಡಾ.ಕೆ.ಅರುಣ್ ಭೇಟಿ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದರು.
ಕಲಬುರಗಿಯಲ್ಲಿ ಪೊಲೀಸರ ಮೇಲೆ ಹಲ್ಲೆ ಆರೋಪ: ಇತ್ತೀಚೆಗೆ ಕಲಬುರಗಿಯಲ್ಲಿ ಕುಡಿದ ಮತ್ತಿನಲ್ಲಿ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿತ್ತು. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು. ಮಲ್ಲಿಕಾರ್ಜುನ ಹಾಗೂ ವಿಜಯ ಬಂಧಿತ ಆರೋಪಿಗಳು.
ಪ್ರಕರಣದ ವಿವರ: ನಗರದ ಸ್ಟೇಷನ್ ಬಜಾರ್ ಠಾಣೆಯ ಕಾನ್ಸ್ಟೇಬಲ್ ಶಾಂತಲಿಂಗ ಮತ್ತು ದೇವೆಂದ್ರ ಎಂಬುವವರು ಮೇ 26ರ ರಾತ್ರಿ ಬೀಟ್ ನಡೆಸುತ್ತಿದ್ದಾಗ ಇಲ್ಲಿನ ರಾಮಮಂದಿರ ಹತ್ತಿರದ ಯರಗೋಳ ಕಲ್ಯಾಣ ಮಂಟಪ ಪಕ್ಕದ ಕಟ್ಟಡವೊಂದರಲ್ಲಿ ಕುಡಿದು ಕಿರಚಾಡುವ ಶಬ್ದ ಕೇಳಿಸಿತ್ತು. ಇಬ್ಬರು ಪೊಲೀಸ್ ಸಿಬ್ಬಂದಿ ಘಟನಾ ಸ್ಥಳಕ್ಕೆ ಹೋಗಿ ವಿಚಾರಿಸಿದ್ದಾರೆ. ಆಗ ಕಂಠ ಪೂರ್ತಿ ಕುಡಿದು ನಶೆಯಲ್ಲಿದ್ದ ಮಲ್ಲಿಕಾರ್ಜುನ ಮತ್ತು ವಿಜಯ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೇ ಕಾನ್ಸ್ಟೇಬಲ್ ಶಾಂತಲಿಂಗ ಅವರ ಶರ್ಟ್ ಹಿಡಿದು ಹಲ್ಲೆ ಮಾಡಿದ್ದರು. ಈ ಸಂಬಂಧ ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಪೊಲೀಸರ ಮೇಲೆ ಹಲ್ಲೆ ಆರೋಪ: ಕಲಬುರಗಿಯಲ್ಲಿ ಇಬ್ಬರು ಆರೋಪಿಗಳ ಬಂಧನ