ದಾವಣಗೆರೆ: ದಕ್ಷಿಣ ಮತಕ್ಷೇತ್ರದ ಚುನಾವಣಾ ಕಣ ರಂಗೇರಿದೆ. ಮತದಾನಕ್ಕೆ ಒಂದೆರಡು ದಿನ ಬಾಕಿ ಇರುವಾಗಲೇ ಮತದಾರರಿಗೆ ಬೆಳ್ಳಿ ಗಣೇಶನ ಮೂರ್ತಿಯನ್ನು ಕೊಟ್ಟು ಬಿಜೆಪಿ ಅಭ್ಯರ್ಥಿ ಪರ ಕಾರ್ಯಕರ್ತರು ಆಮಿಷವೊಡ್ಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಹಗಲು ಹೊತ್ತಲ್ಲೇ ಬಹಿರಂಗವಾಗಿ ಗಣೇಶನ ಮೂರ್ತಿಗಳನ್ನು ಮನೆ ಮನೆಗೆ ತೆರಳಿ ನೀಡುತ್ತಿದ್ದ ಜನರನ್ನು ಹಿಡಿದ ಕಾಂಗ್ರೆಸ್ ಕಾರ್ಯಕರ್ತರು ಚುನಾವಣಾ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ದಕ್ಷಿಣ ವಿಧಾನಸಭಾ ಕ್ಷೇತ್ರದ ಭರತ್ ಕಾಲೋನಿ, ಎಸ್ಜೆಎಂ ನಗರ, ಬೇತೂರು ರಸ್ತೆ, ಯರಗುಂಟೆ, ವಿಜಯನಗರ ಹೀಗೆ ನಾನ ಭಾಗದಲ್ಲಿ ಭಾನುವಾರ ಬೆಳ್ಳಿ ಗಣೇಶನ ಮೂರ್ತಿಗಳು ಮತ್ತು ಧರ್ಮಸ್ಥಳ ಮಂಜುನಾಥ ಸ್ವಾಮಿಯ ಫೋಟೊ ಕೊಟ್ಟು ಬಿಜೆಪಿ ಅಭ್ಯರ್ಥಿ ಪರ ಮತ ಚಲಾಯಿಸುವಂತೆ ಆಣೆ ಪ್ರಮಾಣ ಮಾಡಿಸಿಕೊಳ್ಳಲಾಗುತ್ತಿದೆ ಎಂಬುದು ಕಾಂಗ್ರೆಸ್ ಕಾರ್ಯಕರ್ತರು ಹಾಗು ಮುಖಂಡರ ಆರೋಪ.
ಈಗಾಗಲೇ ಎಸ್ಜೆಎಂ ನಗರದಲ್ಲಿ ಬೆಳ್ಳಿ ಮೂರ್ತಿಗಳನ್ನು ಮನೆ ಮನೆಗೆ ಹಂಚುತ್ತಿದ್ದ ತೇಜಸ್ ಎಂಬ ಯುವಕನನ್ನು ಗಾಂಧಿನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮೂರ್ತಿಗಳನ್ನು ದಾವಣಗೆರೆ ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಹಂಚಲಾಗುತ್ತಿದೆ ಎಂದು ತಿಳಿಸಿದ್ದಾನೆ ಎಂದು ಎಸ್ಪಿ ಕಚೇರಿಯಿಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಯುವಕನ ವಿರುದ್ಧ ಗಾಂಧಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭಾನುವಾರ ಬೇತೂರು ರಸ್ತೆಯಲ್ಲಿ ಬಹಿರಂಗವಾಗಿ ಗಣೇಶ ಮೂರ್ತಿಗಳನ್ನು ಹಂಚುತ್ತಿದ್ದ ಶ್ರೀನಿವಾಸ್ ಎಂಬಾತನನ್ನು ಕೈ ಕಾರ್ಯಕರ್ತರು ಹಾಗು ಕೆಲ ಸ್ಥಳೀಯರ ಹಿಡಿದು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಹೈವೋಲ್ಟೇಜ್ ಬಹಿರಂಗ ಪ್ರಚಾರ ಇಂದೇ ಕೊನೆ
ಇಂದು ಸಂಜೆ ಪ್ರಚಾರಕ್ಕೆ ತೆರೆ: ರಾಜ್ಯ ವಿಧಾನಸಭಾ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರ, ರೋಡ್ ಶೋ ಹಾಗೂ ಸಮಾವೇಶಗಳ ಮೂಲಕ ಮತದಾರರನ್ನು ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಈ ನಡುವೆ ಹೈವೋಲ್ಟೇಜ್ ಮತಪ್ರಚಾರ ಇಂದು ಅಂತ್ಯಗೊಳ್ಳಲಿದೆ. ರಾಜ್ಯದ ಮೂರು ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಕೊನೆಯ ಹಂತದ ಕಸರತ್ತಿನಲ್ಲಿ ನಿರತವಾಗಿವೆ.
ಮತದಾನ ಮುಕ್ತಾಯದ 48 ಗಂಟೆಗೂ ಮುನ್ನ ಬಹಿರಂಗ ಪ್ರಚಾರ ಮುಗಿಯಲಿದೆ. ಅದರಂತೆ ಸೋಮವಾರ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳುತ್ತದೆ. ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಯಾವುದೇ ಅಭ್ಯರ್ಥಿ ಧ್ವನಿವರ್ಧಕ ಬಳಸಿ, ಸಮಾವೇಶ, ರೋಡ್ ಶೋಗಳ ಮೂಲಕ ಮತ ಯಾಚಿಸುವಂತಿಲ್ಲ. ಆದರೆ, ಮನೆ ಮನೆಗೆ ತೆರಳಿ ಮಂಗಳವಾರ ಸಂಜೆಯವರೆಗೂ ಮತ ಕೇಳಬಹುದಾಗಿದೆ.