ದಾವಣಗೆರೆ: ಆರ್ಎಸ್ಎಸ್ ಒಂದೇ ಇದೆ. ಆದರೆ, ಡಿಎಸ್ಎಸ್ ಹತ್ತಾರಾಗಿದೆ ಎಂದು ಮಾದಾರ ಚನ್ನಯ್ಯ ಗುರುಪೀಠದ ಪೀಠಾಧಿಪತಿ ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ.
ದಾವಣಗೆರೆಯ ಜಯನಗರದಲ್ಲಿ ನಡೆದ 'ಸ್ವಾಭಿಮಾನಿ ಎಸ್ಸಿ-ಎಸ್ಟಿ ಸಂವಾದ ಕಾರ್ಯಕ್ರಮ'ದಲ್ಲಿ ಮಾತನಾಡಿದ ಅವರು, ಈ ಹಿಂದೆ ಬೇರೆ ಪಕ್ಷದಿಂದ ಬಂದ 13 ಶಾಸಕರಿಂದ ಯಡಿಯೂರಪ್ಪ ಸಿಎಂ ಆದ್ರು. ಆದರೆ ಎಸ್ಸಿ ಎಸ್ಟಿಯ 52 ಜನ ಶಾಸಕರಿದ್ದರೂ ರಾಜ್ಯದ ಚುಕ್ಕಾಣಿ ಹಿಡಿಯಲು ಆಗಿಲ್ಲ ಎಂಬುದು ದುರಂತ ಎಂದರು.
ಪರಸ್ಪರ ಎಸ್ಸಿ-ಎಸ್ಟಿಗಳೇ ಕಚ್ಚಾಡುವುದು ನಿಲ್ಲಬೇಕು. ರಾಜ್ಯದಲ್ಲಿ 101 ಎಸ್ಸಿ ಹಾಗೂ 50 ಎಸ್ಟಿಗಳಲ್ಲಿ ಉಪಜಾತಿಗಳಿವೆ, ಇವರೆಲ್ಲಾ ಒಂದಾಗಬೇಕು. ಮುಂದಿನ ದಿನಗಳಲ್ಲಿ ಎಸ್ಸಿ-ಎಸ್ಟಿ ಸ್ವಾಮೀಜಿಗಳು ಸೇರಿ ಈ ಎಲ್ಲ ಜಾತಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ ಎಂದು ಹೇಳಿದರು.
ನಾವು ಬಲಪಂಥದ ಬಗ್ಗೆ ಮಾತಾಡುತ್ತೇವೆ. ಆದರೆ ಅವರು ಆರಂಭಿಸಿದ ಆರ್ಎಸ್ಎಸ್ ಸಂಘಟನೆ ಒಂದೇ ಇದೆ, ಡಿಎಸ್ಎಸ್ (ದಲಿತ ಸಂಘರ್ಷ ಸಮಿತಿ) ಹತ್ತಾರು ಸಂಘಟನೆಗಳಾಗಿವೆ ಎಂದು ಬೇಸರ ಹೊರಹಾಕಿದರು.