ದಾವಣಗೆರೆ: ಪಕ್ಷದ ನಿಯಮ ಮೀರಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿರುವ ಮಾಡಾಳ್ ಮಲ್ಲಿಕಾರ್ಜುನ್ ಅವರನ್ನು ಆರು ವರ್ಷಗಳ ಕಾಲ ಬಿಜೆಪಿಯಿಂದ ಉಚ್ಛಾಟನೆ ಮಾಡಿ ಶಿಸ್ತು ಸಮಿತಿಯ ಅಧ್ಯಕ್ಷ ಆದೇಶಿಸಿದ್ದಾರೆ ಎಂದು ದಾವಣಗೆರೆ ಬಿಜೆಪಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್ ತಿಳಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹದಿನೈದು ಜನ ಆಕಾಂಕ್ಷಿಗಳಿದ್ರೂ ಎಲ್ಲೂ ಕೂಡ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿಲ್ಲ. ಆದರೆ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರ ಹಿರಿಯ ಪುತ್ರ ಮಾಡಾಳ್ ಮಲ್ಲಿಕಾರ್ಜುನ ಅವರು ಈಗಾಗಲೇ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಚನ್ನಗಿರಿ ಬಿಜೆಪಿ ಕಾರ್ಯಕರ್ತರಿಗೆ ಗೊಂದಲ, ತೊಂದರೆ ಆಗಬಾರದೆಂದು ಮಾಡಾಳ್ ಮಲ್ಲಿಕಾರ್ಜುನ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದರು.
ವ್ಯಕ್ತಿ ಮುಖ್ಯವಲ್ಲ, ಪಕ್ಷದ ಚಿಹ್ನೆ ಮುಖ್ಯ: ನಮಗೆ ವ್ಯಕ್ತಿ ಮುಖ್ಯವಲ್ಲ, ಪಕ್ಷದ ಚಿಹ್ನೆ ಮುಖ್ಯ. ಕಮಲದ ಗುರುತಿನಿಂದ ಯಾರಿಗೇ ಪಕ್ಷ ಟಿಕೆಟ್ ಕೊಟ್ಟಿರಲೀ, ಅವರು ಯಾರೇ ಬಂಡಾಯ ಎದ್ದರೂ ಅವರು ಎಷ್ಟೇ ದೊಡ್ಡ ವ್ಯಕ್ತಿಯೇ ಇರಲಿ, ಪಕ್ಷ ಸಹಿಸುವುದಿಲ್ಲ. ಯಾರಿಗೆ ಟಿಕೆಟ್ ಸಿಕ್ಕಿದೆಯೋ ಅವರನ್ನು ಗೆಲ್ಲಿಸಿಕೊಂಡು ಬರುವುದು ನಮ್ಮ ಕರ್ತವ್ಯ. ಚನ್ನಗಿರಿಯಲ್ಲಿ ಹೆಚ್.ಎಸ್.ಶಿವಕುಮಾರ್ ಅವರಿಗೆ ಟಿಕೆಟ್ ನೀಡಿದೆ. ಇಲ್ಲಿನ ವಾತಾವರಣ ನೋಡುವುದಾದ್ರೆ ಶಿವಕುಮಾರ್ ಗೆಲುವು ಖಚಿತ. ನಾನು ಕೂಡ ಹರಿಹರ ಟಿಕೆಟ್ ಆಕಾಂಕ್ಷಿ. ಆದ್ರೂ ಟಿಕೆಟ್ ಬೇರೆಯವರಿಗೆ ಸಿಕ್ಕಿದೆ. ಅಭ್ಯರ್ಥಿ ಜೊತೆ ನಾನೂ ಕೂಡ ಕೆಲಸ ಮಾಡ್ತಿದ್ದೇನೆ ಎಂದು ತಿಳಿಸಿದರು.
ಏಪ್ರಿಲ್ 16 ರಂದು ಮಾಡಾಳ್ ಮಲ್ಲಿಕಾರ್ಜುನ್ ಅವರು ಸಾವಿರಾರು ಜನ ಸೇರಿಸಿ ಸ್ವಾಭಿಮಾನಿ ಸಭೆ ನಡೆಸುವ ಮೂಲಕ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಬಗ್ಗೆ ತಿಳಿಸಿದ್ದರು. ಈ ವೇಳೆ ಮಾತನಾಡಿದ್ದ ಅವರು, ಕಾರ್ಯಕರ್ತರು ಮತ್ತು ಮುಖಂಡರು ನನ್ನನ್ನು ಆಶೀರ್ವದಿಸಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಸಲಹೆ, ಅಭಿಪ್ರಾಯ ತಿಳಿಸಿದ್ದಾರೆ. ಐದು ವರ್ಷ ಮನೆಯಲ್ಲಿದ್ದು ಸಮಾಜ ಸೇವೆ ಮಾಡುತ್ತಾ ಕಾಲ ಕಳೆಯೋಣ, ಸಾರ್ವಜನಿಕ ಬದುಕು ಬೇಡ ಎಂದುಕೊಂಡಿದ್ದೆ. ಆದರೆ ಜನರ ಒತ್ತಾಯದಿಂದ ಒಂದು ಹೆಜ್ಜೆ ಮುಂದಿಟ್ಟಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದೇನೆ ಎಂದಿದ್ದರು.
ಇದನ್ನೂ ಓದಿ : ಪಕ್ಷೇತರ ಅಭ್ಯರ್ಥಿಯಾಗಿ ಚನ್ನಗಿರಿಯಿಂದ ಕಣಕ್ಕಿಳಿದ ಮಾಡಾಳ್ ಮಲ್ಲಿಕಾರ್ಜುನ್