ದಾವಣಗೆರೆ: ಶಾಸಕ ಜಮೀರ್ ಅಹ್ಮದ್ ಅವರದ್ದು ಎಲುಬಿಲ್ಲದ ನಾಲಗೆ. ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತೆ ಮೇಲಿನ ಹಲ್ಲೆ ಪ್ರಕರಣ ಸಂಬಂಧ ಕ್ಷುಲ್ಲಕವಾಗಿ ಮಾತನಾಡಿದರೆ, ನಾನು ಸುಮ್ಮನಿರೋಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೊನ್ನಾಳಿಯಲ್ಲಿ ಈ ಬಗ್ಗೆ ಮಾತನಾಡಿರುವ ಅವರು, ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತೆಯರು ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಮಾಹಿತಿ ಕಲೆ ಹಾಕಲು ಹೋಗಿರಲಿಲ್ಲ. ಬದಲಾಗಿ ಕೊರೊನಾ ವೈರಸ್ ಸೋಂಕು ಬಗ್ಗೆ ಮಾಹಿತಿ ಕಲೆ ಹಾಕಲು ತೆರಳಿದ್ದು, ಇದಕ್ಕೆ ಯಾರ ಅನುಮತಿ ಬೇಕಿಲ್ಲ ಎಂದು ಹೇಳಿದ್ದಾರೆ.
ವೈದ್ಯರು, ಪೊಲೀಸರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ವೈದ್ಯಕೀಯ ಸೇವೆ ಸಲ್ಲಿಸುವವರಿಗೆ ಸಿಎಂ ಯಡಿಯೂರಪ್ಪ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ. ನಿಜಾಮುದ್ದೀನ್ ಧಾರ್ಮಿಕ ಸಭೆಗೆ ಹೋಗಿ ಬಂದವರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಈ ಸಭೆಯಿಂದ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಈ ಕಾರ್ಯಕ್ರಮಕ್ಕೆ ಯಾರು ಅನುಮತಿ ಕೊಟ್ಟರು ಎಂಬುದನ್ನು ಕೇಳಬೇಕು. ಅದನ್ನು ಬಿಟ್ಟು ಕೊರೊನಾ ಬಗ್ಗೆ ಜಾಗೃತಿ ಮೂಡಿಸುವವರಿಗೆ ಅಲ್ಲ ಎಂದು ಹೇಳಿದ್ದಾರೆ.
ಕಳೆದ ಒಂಬತ್ತು ದಿನಗಳಿಂದಲೂ ನನ್ನ ಕ್ಷೇತ್ರದಾದ್ಯಂತ ನಾನು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇನೆ. ಜಮೀರ್ ಅಹ್ಮದ್ ಅವರ ಕ್ಷೇತ್ರದಲ್ಲಿ ಜಾಗೃತಿ ಮೂಡಿಸಲಿ. ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಸೂಚನೆ ನೀಡಲಿ. ಅದನ್ನು ಬಿಟ್ಟು ಆಶಾ ಕಾರ್ಯಕರ್ತೆಯರ ಕಾರ್ಯದ ಬಗ್ಗೆ ಲಘುವಾಗಿ ಮಾತನಾಡಿದರೆ ಸುಮ್ಮನಿರಲು ಆಗದು ಎಂದ ಅವರು, ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ ನಡೆಸಿದವರು ದೇಶದ್ರೋಹಿಗಳು. ಈ ಘಟನೆಯನ್ನು ನಾನು ಖಂಡಿಸುತ್ತೇನೆ ಎಂದಿದ್ದಾರೆ.