ದಾವಣಗೆರೆ: ನಾನು ಬಕೆಟ್ ಹಿಡಿಯುವ ರಾಜಕಾರಣ ಮಾಡೋದಿಲ್ಲ, ಬ್ಲಾಕ್ ಮೇಲ್ ರಾಜಕಾರಣ ಗೊತ್ತೇ ಇಲ್ಲ, ರಾಜ್ಯ ನಾಯಕರು ಪಾರ್ಟಿ ಮೀಟಿಂಗ್ ಕರೆಯಲು ತಯಾರಿಲ್ಲ ಪಕ್ಷದಲ್ಲಿ ಸಮಸ್ಯೆ ಕೇಳೋರಿಲ್ಲ ಎಂದು ಹೊನ್ನಾಳಿ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಸ್ವ ಪಕ್ಷದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಮಾತನಾಡಿದ ಅವರು ಚಂದ್ರಯಾನ ಲ್ಯಾಂಡಿಂಗ್ ಆಗಿರುವುದು ಒಂದು ದೊಡ್ಡ ಸಾಧನೆ, ಇಸ್ರೋ ವಿಜ್ಞಾನಿಗಳ ಸಾಧನೆಗೆ ಪ್ರಶಂಸನೀಯ. ಚಂದ್ರನ ದಕ್ಷಿಣ ಭಾಗದಲ್ಲಿ ಲ್ಯಾಂಡರ್ ಅನ್ನು ಲ್ಯಾಂಡಿಂಗ್ ಮಾಡಿರುವ ಪ್ರಥಮ ರಾಷ್ಟ್ರ, ಇಂತ ಸಾಧನೆ ಗಳನ್ನು ಮನೆ ಮನೆಗೆ ತಿಳಿಸಬೇಕು, ಇವುಗಳನ್ನು ಮತಗಳನ್ನಾಗಿ ಪರಿವರ್ತಿಸಬೇಕು. ಆದರೆ ನಮ್ಮ ನಾಯಕರು ಭ್ರಮಾಲೋಕದಲ್ಲಿದ್ದಾರೆ. ಕಳೆದ ಚುನಾವಣೆ ಏನ್ ಆಗಿದೆ ಎನ್ನುವುದು ನೋಡಿಕೊಳ್ಳಲಿ. ಮೋದಿ ಮುಖ ತೋರಿಸಿ ಗೆಲ್ಲುತ್ತೇವೆ ಎನ್ನುವರು ಜಾಸ್ತಿ ಜನ ಇದ್ದಾರೆ ಎಂದು ಟೀಕಿಸಿದರು.
ರಾಜ್ಯ ನಾಯಕರ ಕೊಡುಗೆ ಏನಿದೆ?: ಕರ್ನಾಟಕದಲ್ಲಿ ಹಲವು ನಾಯಕರು ಮೋದಿ ಮುಖ ತೋರಿಸಿ ಗೆಲ್ಲುತ್ತೇವೆ ಎನ್ನುವ ಭ್ರಮಾಲೋಕದಲ್ಲಿದ್ದಾರೆ, ರಾಜ್ಯ ನಾಯಕರ ಕೊಡುಗೆ ಏನಿದೆ, ಮೋದಿಯವರ ಜನಪ್ರಿಯ ಕಾರ್ಯಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತಿಲ್ಲ. ಬೇರೆ ರಾಜ್ಯದ ಮುಖ್ಯಮಂತ್ರಿಗಳು ಮೋದಿಯವರ ಕೆಲಸವನ್ನು ಮನೆ ಮನೆಗೆ ಮುಟ್ಟಿಸುವ ಕೆಲಸ ಮಾಡುತ್ತಾರೆ. ನಮ್ಮ ರಾಜ್ಯದ ನಾಯಕರನ್ನು ಸಾಮಾಜಿಕ ಜಾಲತಾಣದಲ್ಲಿ ಪೋಟೋ ಹಾಕಿ ಪ್ರಚಾರ ಮಾತ್ರ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.
ನಾಯಕನಿಲ್ಲದೇ ಪಕ್ಷ ಅತಂತ್ರ: ಜನ ಸಾಮಾನ್ಯರು ಕೇಳ್ತಾ ಇದಾರೆ.. ಆದರೆ ರಾಜ್ಯ ನಾಯಕರ ನೇಮಕ ಆಗಿಲ್ಲ ಎಂದರು. ಕರ್ನಾಟಕದ ಬಿಜೆಪಿಯನ್ನು ಎಲ್ಲೋ ಒಂದು ಕಡೆ ಯಾರೋ ಒಬ್ಬರು ನಿಯಂತ್ರಣ ಮಾಡುತ್ತಿದ್ದಾರೆ. ಇದೇ ರೀತಿ ಮುಂದುವರಿದರೆ ರಾಜ್ಯ ಅಧೋಗತಿಗೆ ಹೋಗುತ್ತೆ, ಪಕ್ಷದಲ್ಲಿ ನಾಯಕರು ಇಲ್ಲ ಎಂದು ಬೇರೆ ಪಕ್ಷಕ್ಕೆ ಹೋಗುತ್ತಿದ್ದಾರೆ. ಅಲ್ಲದೇ ಹೋಗುವವರು ಹೋಗಲಿ, ಇರುವವರು ಇರಲಿ ಎಂದು ದುರಹಂಕಾರದ ಮಾತುಗಳನ್ನಾಡುತ್ತಿದ್ದಾರೆ. ಇದನ್ನೆಲ್ಲ ಬಿಡಬೇಕು ಪಕ್ಷ ಸಂಘಟನೆ ಮಾಡಬೇಕು ಎಂದು ಸಂಸದ ಜಿಎಂ ಸಿದ್ದೇಶ್ವರ್ ವಿರುದ್ಧ ಪರೋಕ್ಷವಾಗಿ ರೇಣುಕಾಚಾರ್ಯ ಕಿಡಿಕಾರಿದರು.
ನಾನು ಬಕೆಟ್ ಹಿಡಿಯುವ ರಾಜಕಾರಣ ಮಾಡೋದಿಲ್ಲ: ನಾನು ಬಕೆಟ್ ಹಿಡಿಯುವ ರಾಜಕಾರಣ ಮಾಡೋದಿಲ್ಲ, ರಾಜ್ಯ ನಾಯಕರು ಪಾರ್ಟಿ ಮೀಟಿಂಗ್ ಕರೆಯಲು ತಯಾರಿಲ್ಲ, ಸಮಸ್ಯೆ ಕೇಳೋರಿಲ್ಲ, ನಾನು ಬಿಜೆಪಿ ಬಿಡುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಬಿಜೆಪಿ ಪಾರ್ಟಿ ಆಫೀಸ್ ನಿಂದ ರೇಣುಕಾಚಾರ್ಯ ಕಾಂಗ್ರೇಸ್ ಸೇರುತ್ತಿದ್ದಾರೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತೇನೆಂದು ಎಲ್ಲೂ ಹೇಳಿಲ್ಲ. ನಾವು ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುತ್ತೇವೆಂದು ಹೇಳುತ್ತಿದ್ದೆವು, ಆದರೇ ಆ ಪರಿಸ್ಥಿತಿ ಇದೀಗ ನಮಗೆ ಬಂದಿದೆ. ನಾನು ಬ್ಲಾಕ್ ಮೇಲ್ ರಾಜಕಾರಣ ಮಾಡೋದಿಲ್ಲ, ಕರ ಪತ್ರ ಹಂಚಿಕೊಂಡು ಬೂಟಾಟಿಕೆ ಮಾಡ್ತಿನಾ, ನಾನು ಕ್ಷೇತ್ರದ ಸಮಸ್ಯೆಗಾಗಿ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿದರೆ ಏನು ತಪ್ಪು ಎಂದು ಪ್ರಶ್ನಿಸಿದರು.
ಪತ್ರಿಕಾ ಹೇಳಿಕೆ ನೀಡುವ ಟೈಗರ್ಸ್ ಗಳಾಗಿದ್ದಾರೆ : ಕೆಲವರು ಪತ್ರಿಕಾ ಹೇಳಿಕೆ ನೀಡುವ ಟೈಗರ್ಗಳಾಗಿದ್ದಾರೆ, ಪಕ್ಷ ನನಗೆ ತಾಯಿ ಸಮಾನ. ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ, ಕೆಲ ನಾಯಕರ ನಡೆಯಿಂದ ನನ್ನ ಮನಸ್ಸಿಗೆ ನೋವುಂಟಾಗಿದೆ. ಅದನ್ನು ಖಂಡಿಸುತ್ತೇನೆ. ಯಡಿಯೂರಪ್ಪ ಅವರನ್ನು ಕಡೆಗಣಿಸಿದ್ದೇ ಪಕ್ಷಕ್ಕೆ ಶಾಪವಾಗಿದೆ ಎಂದು ಕಾಂಗ್ರೆಸ್ ನವರೇ ಹೇಳುತ್ತಿದ್ದಾರೆ. ರೇಣುಕಾಚಾರ್ಯ ಬೆಳೆಯುತ್ತಾನೆ ಎಂದು ತುಳಿಯುವ ಕೆಲಸ ಮಾಡಿದ್ದಾರೆ. ನಾನು ಮಾತನಾಡಿದ ತಕ್ಷಣ ರೇಣುಕಾಚಾರ್ಯ ಪಕ್ಷ ಬಿಡುತ್ತಾನೆ ಎಂದು ಬಿಂಬಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: ಸಿಎಂ, ಡಿಸಿಎಂ ಭೇಟಿಯಾದ ರೇಣುಕಾಚಾರ್ಯ; ಕುತೂಹಲ ಮೂಡಿಸಿದ ಬಿಎಸ್ವೈ ಆಪ್ತನ ನಡೆ