ದಾವಣಗೆರೆ : ಇಲ್ಲೊಂದು ಕಿವುಡ ಮೂಗ ಜೋಡಿ ಪ್ರೀತಿಸಿದ್ದು, ಪರಸ್ಪರ ಸನ್ನೆ ಮೂಲಕವೇ ಸಂಭಾಷಿಸುವ ಈ ಯುವ ಜೋಡಿ ಹಕ್ಕಿಗಳಿಬ್ಬರು ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಜೋಡಿ ನಾಲ್ಕೈದು ವರ್ಷಗಳಿಂದ ಪ್ರೀತಿಸುತ್ತಿದ್ದು, ಪೋಷಕರ ವಿರೋಧದ ನಡುವೆಯೂ ನವ ಜೀವನಕ್ಕೆ ಕಾಲಿಟ್ಟಿದೆ.
ಈ ಜೋಡಿಯ ಹೆಸರು ಸಂಜು ಮತ್ತು ಅಕ್ಷತಾ. ಸಂಜು ವಾಲ್ಮೀಕಿ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕಡಬಗೆರೆ ಗ್ರಾಮದ ನಿವಾಸಿಯಾಗಿದ್ದಾರೆ. ಅಕ್ಷತಾ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಮೇಡ್ಲೇರಿ ಗ್ರಾಮದವರು. ಇವರಿಬ್ಬರು ಒಂದಾಗಿರುವುದೇ ಒಂದು ರೋಚಕ ಕಹಾನಿ.
ದಾವಣಗೆರೆಯ ಡಿಸಿಎಂ ಟೌನ್‌ಶಿಪ್‌ನಲ್ಲಿರುವ ಮೌನೇಶ್ವರ ಮೂಗರ ಮತ್ತು ಕಿವುಡರ ವಸತಿ ಶಾಲೆಯಲ್ಲಿ ಇವರಿಬ್ಬರೂ ಜತೆಯಲ್ಲೇ 1 ರಿಂದ 10 ನೇ ತರಗತಿವರೆಗೆ ಅಧ್ಯಯನ ಮಾಡಿದ್ರು. ಬಳಿಕ ಇಬ್ಬರು ತಮ್ಮ ತಮ್ಮ ಗ್ರಾಮಕ್ಕೆ ಮರಳಿದ್ದಾರೆ. ಸಂಜು ಬೆಂಗಳೂರಿಗೆ ತೆರಳಿ ಐಟಿಐ ಪೂರ್ಣಗೊಳಿಸಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆದ್ರೆ ಅವರಿಬ್ಬರ ಬಾಲ್ಯದ ಸ್ನೇಹವನ್ನು ಒಂದು ಮಾಡಿದ್ದು, ಮೊಬೈಲ್‌ನಲ್ಲಿರುವ ವಾಟ್ಸಾಪ್.
ಇದನ್ನೂ ಓದಿ: ಕಲಿತ ಕಾಲೇಜಿನಲ್ಲಿ ಪದ್ಮಶ್ರೀ ಪುರಸ್ಕೃತರಿಗೆ ಸನ್ಮಾನ.. ನಡಕಟ್ಟಿನ್ರಿಗೆ ಅಭಿನಂದನೆ ಸಲ್ಲಿಸಿದ ಸಿಬ್ಬಂದಿ..
ವಾಟ್ಸಪ್ ವಿಡಿಯೋ ಕಾಲ್ ಮೂಲಕ ಇಬ್ಬರೂ ಒಂದಾಗಿ, ಸನ್ನೆ ಮೂಲಕ ದಿನ ವಿಡಿಯೋ ಕಾಲ್ ನಲ್ಲಿ ಮಾತನಾಡುತ್ತಿದ್ದರು. ಹೀಗೆ ಮಾತನಾಡುತ್ತಾ ಬೆಳೆದ ಸ್ನೇಹ ಬರುಬರುತ್ತಾ ಪ್ರೀತಿಗೆ ತಿರುಗಿದೆ. ನಂತರ ಸಂಜು ಅಕ್ಷತಾ ಮದುವೆಯಾಗಲು ತಂದೆ ತಾಯಿಯ ಒಪ್ಪಿಗೆ ಪಡೆದುಕೊಂಡಿದ್ದಾರೆ. ಆದ್ರೆ ಅಕ್ಷತಾಳ ಮನೆಯವರು ಮಾತ್ರ ಒಪ್ಪಲಿಲ್ಲ. ಬಳಿಕ ಈ ಜೋಡಿ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.
ಒಟ್ಟಿನಲ್ಲಿ ಕೊನೆಗೂ ಈ ಕಿವುಡ -ಮೂಗ ಜೋಡಿ ಒಂದಾಗಿದೆ. ಪ್ರೇಮಕ್ಕೆ ಬೇಕಾಗಿರುವುದು ಭಾಷೆಯಲ್ಲ, ಭಾವನೆ ಹಾಗೂ ಪರಸ್ಪರ ಹೊಂದಾಣಿಕೆ ಎಂಬುದು ಸಂಜು ಮತ್ತು ಅಕ್ಷತಾ ಅವರು ತೋರಿಸಿಕೊಟ್ಟಿದ್ದಾರೆ. ಇಬ್ಬರೂ ಒಂದಾಗಿ ಬಾಳಿನ ಪಯಣ ಆರಂಭಿಸಿದ್ದಾರೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ