ದಾವಣಗೆರೆ: ಭೂ ಪರಿವರ್ತನೆಗಾಗಿ ಲಂಚಕ್ಕೆ ಬೇಡಿಕೆ ಇಟ್ಟು ಹಣ ಸ್ವೀಕರಿಸುವಾಗ ಹರಿಹರ ತಾಲೂಕು ಪಂಚಾಯತ್ ಇಒ ರವಿ ಹಾಗೂ ಸಾರಥಿ ಗ್ರಾಪಂ ಪಿಡಿಒ ರಾಘವೇಂದ್ರ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದವರು. ಜಿಲ್ಲೆಯ ಹರಿಹರದ ಬಳಿಯ ಅಮರಾವತಿ ಕಾಲೋನಿಯಲ್ಲಿ ಪಿಡಿಒ ರಾಘವೇಂದ್ರ ಅವರ ನಿವಾಸದಲ್ಲಿ 1.50 ಲಕ್ಷ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಒ ರವಿ ಅವರ ನಿರ್ದೇಶನದಂತೆ ಪಿಡಿಓ ಲಂಚ ಸ್ವೀಕಾರಿಸಿದ ಹಿನ್ನೆಲೆ ರವಿ ಅವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶ್ರೀನಿವಾಸ ಟಿವಿ ಎಂಬುವರು ಹರಿಹರ ತಾಲೂಕಿನ ಸಾರಥಿ ಗ್ರಾ.ಪಂ ವ್ಯಾಪ್ತಿಯ ಕರಲಹಳ್ಳಿ ಬಳಿ ಒಂದು ಎಕರೆ ಜಮೀನು ಖರೀದಿಸಿ ಸೈಟ್ ಮಾಡಲು ಯೋಜಿಸಿದ್ದರು. ಅದಕ್ಕಾಗಿ ಭೂ ಪರಿವರ್ತನೆಗೆ ಅನುಮತಿ ನೀಡಲು ಕೋರಿದ್ದರು. ಇದಕ್ಕೆ ಇಒ ರವಿ 1.60 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದರಂತೆ 1.50 ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಎಸ್ಪಿ ಎಂಎಸ್ ಕೌಲಾಪೂರೆ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಗಳಾದ ಮಧುಸೂದನ್, ಪ್ರಭು ಸೂರಿನ್ ಹಾಗೂ ಸಿಬ್ಬಂದಿ ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಲೋಕಾ ಬಲೆಗೆ ಬೆಸ್ಕಾಂ ಎಇಇ: ಕಳೆದ ತಿಂಗಳು ಬೆಂಗಳೂರಿನಲ್ಲಿ ಬೆಸ್ಕಾಂ ಅಧಿಕಾರಿಯಬ್ಬರು ಲಂಚಕ್ಕೆ ಬೇಡಿಕೆ ಇಟ್ಟು ಹಣ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ವಿದ್ಯುತ್ ಸಂಪರ್ಕ ನೀಡಲು 13 ಲಕ್ಷ ರೂಪಾಯಿ ಲಂಚದ ಬೇಡಿಕೆಯಿಟ್ಟಿದ್ದ ಬೆಸ್ಕಾಂ ಎಇಇ ಧನಂಜಯ ಎಂಬವರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದರು. ಜಯನಗರದ ಕಟ್ಟಡವೊಂದಕ್ಕೆ ವಿದ್ಯುತ್ ಸಂಪರ್ಕ ಪಡೆಯಲು ಕಾಂಟ್ರಾಕ್ಟರ್ಗಳಾದ ಶಂಕರ್ ಮತ್ತು ಗುರುದತ್ ಎಂಬವರು ಅರ್ಜಿ ಸಲ್ಲಿಸಿದ್ದರು. ವಿದ್ಯುತ್ ಸಂಪರ್ಕ ನೀಡಲು ಧನಂಜಯ ಖಾಸಗಿ ವ್ಯಕ್ತಿ ಸಯ್ಯದ್ ನಿಜಾಮ್ ಎಂಬಾತನನ್ನು ಮುಂದಿಟ್ಟುಕೊಂಡು ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಇಂದು ಲೋಕಾಯುಕ್ತ ಇನ್ಸ್ಪೆಕ್ಟರ್ ವೆಂಕಟೇಶ ಮತ್ತು ವಿಜಯಕೃಷ್ಣ ತಂಡ ಟ್ರ್ಯಾಪ್ ಕಾರ್ಯಾಚರಣೆ ನಡೆಸಿದೆ. ಮುಂಗಡವಾಗಿ 3.5 ಲಕ್ಷ ರೂ. ಲಂಚ ಸ್ವೀಕರಿಸುವಾಗ ಎಇಇ ಲೋಕಾಯುಕ್ತ ಬಲೆಗೆ ಬಿದ್ದಿದ್ದರು.
ಮತ್ತೊಂದು ಲೋಕಾ ದಾಳಿಯಲ್ಲಿ ಬಂಧನದಲ್ಲಿ ಆರೋಪಿಗೆ ಸಹಾಯ ಮಾಡುವುದಾಗಿ ಹೇಳಿ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಹೆಡ್ ಕಾನ್ಸ್ಟೇಬಲ್ ಲಂಚ ಸ್ವೀಕರಿಸುವಾಗ ಲೋಕಾ ಬಲೆಗೆ ಬಿದ್ದ ಘಟನೆ ಬೆಂಗಳೂರಲ್ಲಿ ನಡೆದಿತ್ತು.
ಇದನ್ನೂ ಓದಿ: ಬೆಂಗಳೂರಿನ 12 ಆರ್ಟಿಒ ಕಚೇರಿಗಳ ಮೇಲೆ ಲೋಕಾಯುಕ್ತರ ದಾಳಿ