ದಾವಣಗೆರೆ: ಪತಿ ಪತ್ನಿ ನಡುವಿನ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮಾತಿದೆ. ಆದರೆ 13 ಜೋಡಿಗಳು ಚಿಕ್ಕಪುಟ್ಟ ವಿಚಾರಕ್ಕೆ ಜಗಳವಾಡಿ ವಿಚ್ಛೇದನಕ್ಕಾಗಿ ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲ್ಲು ಹತ್ತಿದ್ದರು. ಆದರೆ, ಜಿಲ್ಲಾ ಕೌಟುಂಬಿಕ ನ್ಯಾಯಾಲಯ ಅವರಿಗೆ ವಿಚ್ಛೇದನ ಕೊಡಿಸದೇ 13 ಜೋಡಿಗಳು ಮತ್ತೆ ಒಂದಾಗುವಂತೆ ಮಾಡಿದೆ. ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಸತಿಪತಿಗಳು ನಾನೊಂದು ತೀರ ನೀನೊಂದು ತೀರ ಎನ್ನುವ ರೀತಿಯಲ್ಲಿ ಜೀವನ ಮಾಡುತ್ತಿದ್ದ ವೇಳೆ ದಾವಣಗೆರೆ ಜಿಲ್ಲಾ ಕೌಟುಂಬಿಕ ನ್ಯಾಯಾಲಯ ಮಧ್ಯ ಪ್ರವೇಶಿಸಿ ಸತಿಪತಿಗಳನ್ನು ಒಂದಾಗಿಸಿದೆ.
ದಾವಣಗೆರೆ ಜಿಲ್ಲಾ ಮುಖ್ಯ ನ್ಯಾಯಾಧೀಶೆ ರಾಜೇಶ್ವರಿ ಎನ್ ಹೆಗಡೆ ಅವರ ನೇತೃತ್ವದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ 13 ಜೋಡಿಗಳು ನ್ಯಾಯಧೀಶರ ಸಮ್ಮುಖದಲ್ಲಿ ಹಾರ ಬದಲಾಯಿಸಿಕೊಂಡು ಸಿಹಿ ತಿನ್ನಿಸುವ ಮೂಲಕ ಮತ್ತೇ ಸತಿಪತಿಗಳಾಗಿದ್ದಾರೆ. ಇಂದು ದೇಶಾದ್ಯಂತ ರಾಷ್ಟ್ರೀಯ ಲೋಕ ಅದಾಲತ್ ನಡೆದಿದ್ದು, 5 ಸಾವಿರ ಕೇಸ್ಗಳ ವಿಚಾರಣೆ ನಡೆದಿದೆ. ಬೇರೆ ಬೇರೆ 2,500 ವ್ಯಾಜ್ಯ ಪ್ರಕರಣಗಳು ಇತ್ಯರ್ಥ ಆಗಿವೆ.
ಈ ಸಂದರ್ಭದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ 13 ಜೋಡಿಗಳಿಗೆ ಕಾನೂನು ಸೇವಾ ಪ್ರಾಧಿಕಾರದಡಿ ರಾಜೀ ಮಾಡಿಸಿ ಜೀವನಕ್ಕೆ ದಾರಿ ಮಾಡಿಕೊಡಲಾಯಿತು. ಸಣ್ಣಪುಟ್ಟ ಕಾರಣಗಳಿಗೆ ಮನಸ್ತಾಪವಾಗಿ 3 - 4 ವರ್ಷಗಳಿಂದ ದೂರವಿದ್ದ ಸತಿಪತಿಗಳು ವಿಚ್ಛೇದನ ಮರೆತು ಮತ್ತೆ ಒಂದಾಗಿ ಜೀವನ ನಡೆಸಲು ಒಪ್ಪಿಕೊಂಡಿದ್ದಾರೆ. ಇದಕ್ಕೆ ಇಡೀ ದಾವಣಗೆರೆ ಜಿಲ್ಲಾ ನ್ಯಾಯಾಧೀಶರು, ವಕೀಲರ ಸಂಘ, ಕಾನೂನು ಸೇವಾ ಪ್ರಾಧಿಕಾರ ಸಾಕ್ಷಿಯಾಗಿದೆ.
ಈ ವೇಳೆ ಜಿಲ್ಲಾ ಮುಖ್ಯ ನ್ಯಾಯಾಧೀಶೆ ರಾಜೇಶ್ವರಿ ಎನ್ ಹೆಗಡೆ ಮಾತನಾಡಿ "ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ಏನು ಪ್ರಯೋಜನ ಆಗಿದೆ ಎಂದರೆ ಇದೇ ಒಂದು ನಿದರ್ಶನ, ಎಲ್ಲರ ಪ್ರಯತ್ನದಿಂದ 13 ಜೋಡಿಗಳನ್ನು ಒಂದಾಗಿಸಿದ್ದೇವೆ. ಚಿಕ್ಕ ಪುಟ್ಟ ವಿಚಾರಕ್ಕೆ ಜಗಳವಾಡಿ ದಂಪತಿ ದೂರವಾಗಿದ್ದರು. ಅಂತಹವರಿಗೆ ಮಕ್ಕಳ ಭವಿಷ್ಯದ ದೃಷ್ಟಿಯಿಂದ ವಿಚ್ಛೇದನ ಕೊಡಿಸದೇ ರಾಜಿ ಮಾಡಿಸಿ ಒಂದಾಗುವಂತೆ ಮಾಡಿದ್ದೇವೆ. ನಾವು ಈ ದಿನ 5000 ಸಾವಿರ ಪ್ರಕರಣಗಳನ್ನು ಇತ್ಯರ್ಥ ಗೊಳಿಸಬೇಕೆಂದು ಕೊಂಡಿದ್ದೆವು. ಅದರಲ್ಲಿ 2,500 ವಿವಿಧ ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದೇವೆ" ಎಂದರು.
ಎರಡು ಮಕ್ಕಳಾದ ನಂತರ ಪತಿಯ ತೀವ್ರ ಕಿರಿಕಿರಿಯಿಂದ ಒಂದು ವರ್ಷ ಕಾಲ ದೂರವಿದ್ದ ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಪತಿಯ ಮಾನಸಿಕ ರೋಗ ಈ ಸಂಸಾರದ ಕಿರಿಕಿರಿಗೆ ಕಾರಣ ಎಂಬುದನ್ನು ಕೋರ್ಟ್ ಪತ್ನಿಗೆ ಮನವರಿಕೆ ಮಾಡಿಕೊಟ್ಟಿತ್ತು. ನಂತರ ಪತಿ ವೈದ್ಯರು ನೀಡಿದ ಚಿಕಿತ್ಸೆಯಿಂದ ಗುಣಮುಖನಾಗಿದ್ದು, ಮತ್ತೆ ಒಂದಾಗಿ ನ್ಯಾಯಾಧೀಶರ ಸಮ್ಮುಖದಲ್ಲಿ ಪರಸ್ಪರ ಹಾರ ಬದಲಿಸಿ ಹೊಸ ಜೀವನಕ್ಕೆ ನಾಂದಿ ಹಾಡಿದ್ದಾರೆ. ಹೀಗೆ 12 ಜೋಡಿಗಳದ್ದು ಒಂದೊಂದು ಕತೆ ಇದ್ದು, ಎಲ್ಲ ವಿರಸ ಮನಸ್ತಾಪ ಮರೆತು ಪರಸ್ಪರ ಒಂದಾಗಿದ್ದಾರೆ. ಸತಿಪತಿಗಳ ಪರಸ್ಪರ ಸಿಹಿ ತಿನಿಸಿ ಒಂದಾಗಿದ್ದು ನ್ಯಾಯಾಧೀಶರಿಗೂ ಖುಷಿ ತಂದಿದೆ.
ಈ ವೇಳೆ ಒಂದಾದವರಲ್ಲಿ ಒಬ್ಬರಾದ ಹರ್ಷಿತಾ ಮಾತನಾಡಿ "ಒಂದು ವರ್ಷ ಎರಡು ತಿಂಗಳಿಂದ ದೂರವಾಗಿದ್ದೆವು. ನಮ್ಮ ಮಗನಿಗೋಸ್ಕರ ಒಂದಾಗಿದ್ದೇವೆ. ನಾನು ನಮ್ಮ ಗಂಡ ಹರೀಶ್ ಒಂದಾಗಲು ನಮ್ಮ ವಕೀಲರ ಸಹಕಾರ ಇದೆ. ತುಂಬಾ ಖುಷಿಯಾಗುತ್ತಿದೆ. ತುಂಬಾ ಚೆನ್ನಾಗಿ ಇರಬೇಕೆಂದುಕೊಂಡಿದ್ದೇವೆ. ಮುಖ್ಯ ನ್ಯಾಯಮೂರ್ತಿಗೆ ಧನ್ಯವಾದಗಳು. ಅವರು ಕಾಲಾವಕಾಶ ಪಡೆದು ಪಂಚಾಯಿತಿ ಮಾಡಿ ನಮ್ಮನ್ನು ಒಂದಾಗಿಸಿದ್ದಾರೆ" ಎಂದು ಹರ್ಷವ್ಯಕ್ತಪಡಿಸಿದರು.
ಇದನ್ನೂ ಓದಿ : 6 ವರ್ಷಗಳಿಂದ ವಿರಸ.. ವಿಚ್ಛೇದನಕ್ಕೆ ಮುಂದಾಗಿದ್ದ ಒಂದೇ ಕುಟುಂಬದ 2 ಜೋಡಿಗಳ ಬಾಳಲ್ಲಿ ಲೋಕ ಅದಾಲತ್ನಿಂದ ಮೂಡಿತು ಸಮರಸ