ದಾವಣಗೆರೆ: ಬೆಣ್ಣೆದೋಸೆಗೆ ಖ್ಯಾತವಾಗಿರುವ ದಾವಣಗೆರೆ ಜವಳಿ ಉದ್ಯಮದಲ್ಲೂ ಮುಂಚೂಣಿಯಲ್ಲಿದೆ. ಆದರೆ, ಕೊರೊನಾ ಸೋಂಕು ಕಾಣಿಸಿಕೊಂಡ ಬಳಿಕ ಇಲ್ಲಿನ ಟೆಕ್ಸ್ಟ್ಟೈಲ್ಸ್ ಉದ್ಯಮ ಸಂಪೂರ್ಣ ನೆಲಕಚ್ಚಿದೆ. ದೊಡ್ಡ ದೊಡ್ಡ ಅಂಗಡಿಗಳಷ್ಟೇ ಅಲ್ಲದೇ ಸಣ್ಣಪುಟ್ಟ ವ್ಯಾಪಾರಿಗಳೂ ಸಂಕಷ್ಟಕ್ಕೊಳಗಾಗಿದ್ದಾರೆ. ಜವಳಿ ಉದ್ಯಮಕ್ಕೆ ಸುಮಾರು 600 ಕೋಟಿ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಜಿಲ್ಲೆಯಲ್ಲಿ ಬಿ.ಎಸ್.ಚನ್ನಬಸಪ್ಪ ಅಂಡ್ ಸನ್ಸ್, ಶಾಂತಲಾ, ಅಂಬಾರ್ಕರ್, ಮಹೇಂದ್ರಕರ್, ರವಿತೇಜ ಸೇರಿದಂತೆ 570 ಗಾರ್ಮೆಂಟ್ಸ್ ಹಾಗೂ ಟೆಕ್ಸ್ಟ್ಟೈಲ್ಸ್ಗಳಿವೆ. ಸುಮಾರು 8 ರಿಂದ 9 ಸಾವಿರ ಮಂದಿ ಈ ಉದ್ಯಮ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ.
ಲಾಕ್ಡೌನ್ ಆದ ಕಾರಣ ಜನರು ಬಟ್ಟೆ ಖರೀದಿಗೆ ಬಂದಿಲ್ಲ. ಯುಗಾದಿ, ರಂಜಾನ್, ಮದುವೆ ಸೀಸನ್ ವೇಳೆಯಲ್ಲಿ ಕೋಟ್ಯಂತರ ರೂಪಾಯಿ ಮಾಡುತ್ತಿದ್ದ ಉಡುಪು ಅಂಗಡಿಗಳು ಬಂದ್ ಆಗಿದ್ದವು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇಕಡಾ 20ರಷ್ಟು ವ್ಯಾಪಾರ ಆಗಿಲ್ಲ. ಖರೀದಿ ಮಾಡಿದ್ದ ಬಟ್ಟೆಗಳು ಸೇಲ್ ಆಗಿಲ್ಲ. ಇದರಿಂದ ಅಂಗಡಿಗಳ ಮಾಲೀಕರು ತುಂಬಾನೇ ನಷ್ಟಕ್ಕೆ ಒಳಗಾಗಿದ್ದಾರೆ.
ಮಳಿಗೆಗಳ ಬಾಡಿಗೆ, ವಿದ್ಯುಚ್ಛಕ್ತಿ ಬಿಲ್, ನೌಕರರಿಗೆ ಸಂಬಳ, ಬ್ಯಾಂಕಿಗೆ ಇಎಂಐ ಕಟ್ಟಬೇಕಾದ ಸಂಕಷ್ಟದಲ್ಲಿಅಂಗಡಿಗಳ ಮಾಲೀಕರಿದ್ದಾರೆ. ಈ ಎಲ್ಲ ಸಮಸ್ಯೆಗಳ ನಡುವೆ ವ್ಯಾಪಾರವೂ ಇಲ್ಲ. ಲಾಕ್ಡೌನ್ ತೆರವುಗೊಳಿಸಿದರೂ ಜನರು ಬರದೇ ವ್ಯಾಪಾರವೂ ಆಗುತ್ತಿಲ್ಲ. ಬಟ್ಟೆ ಅಂಗಡಿಗಳು ಖಾಲಿ ಹೊಡೆಯುತ್ತಿವೆ.
ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಎರಡು ತಿಂಗಳಿಗೂ ಹೆಚ್ಚು ಲಾಕ್ ಡೌನ್ ಮಾಡಲಾಯಿತು. ಕೆಲಸವೂ ಇಲ್ಲ, ಆದಾಯವೂ ಇಲ್ಲ. ಜನರ ಬಳಿ ಹಣವೂ ಇಲ್ಲ. ಇನ್ನು ಹೊಟ್ಟೆಗೆ ಇಲ್ಲದಿರುವಾಗ ಬಟ್ಟೆ ಎಲ್ಲಿ ಖರೀದಿ ಮಾಡುವುದು ಎನ್ನುವುದು ಗ್ರಾಹಕರ ಮಾತು.