ದಾವಣಗೆರೆ: ಅದು ಹರಿಹರ ತಾಲೂಕಿನ ಸಾಲುಕಟ್ಟೆ ಗ್ರಾಮವನ್ನು ಸಂಪರ್ಕಿಸುವ ಏಕೈಕ ರಸ್ತೆ. ಈ ಗ್ರಾಮಕ್ಕೆ ತೆರಳಬೇಕಾದರೆ ಅದೊಂದೇ ರಸ್ತೆಯ ಮೂಲಕವೇ ಕ್ರಮಿಸಬೇಕು. ಆದರೆ, ಆ ರಸ್ತೆಯನ್ನೀಗ ಜಮೀನಿನ ಮಾಲೀಕರೊಬ್ಬರು ಕಡಿತಗೊಳಿಸಿದ್ದಾರೆ.
ಜಮೀನು ಮಾಲೀಕ ತನ್ನ ಜಮೀನನ್ನು ಅಳತೆ ಮಾಡಿಸಿದ್ದು, ಆ ಜಾಗದಲ್ಲಿ ರಸ್ತೆ ಇಲ್ಲದಿರುವುದು ಗೊತ್ತಾಗಿದೆ. ಆಗ ಅವರು ಬೇರೆ ರಸ್ತೆ ನಿರ್ಮಿಸಿಕೊಳ್ಳಿ ಎಂದು ಗ್ರಾಮಸ್ಥರಿಗೆ ಸೂಚಿಸಿದ್ದಾರೆ. ಆದರೆ ಅದಕ್ಕೆ ಗ್ರಾಮಸ್ಥರು ಒಪ್ಪಲಿಲ್ಲ. ಹೀಗಾಗಿ ಇದೀಗ ಜಮೀನಿನ ಮಾಲೀಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಜಮೀನು ಮಲೀಕ ರಸ್ತೆಗೆ ಅಡ್ಡ ಗುಂಡಿ ತೋಡಿ ಯಾರೂ ಸಂಚರಿಸದಂತೆ ಮಾಡಿದ್ದಾರೆ. ಹೀಗಾಗಿ ಸಾಲಕಟ್ಟೆ ಗ್ರಾಮಕ್ಕೆ ಸಂಪರ್ಕ ರಸ್ತೆ ಇಲ್ಲದಂತಾಗಿದೆ. ಸುಮಾರು 60 ವರ್ಷಗಳಿಂದ ಇದೇ ರಸ್ತೆ ಗ್ರಾಮದ ಒಡನಾಡಿಯಾಗಿತ್ತು" ಎಂದು ಜನರು ಹೇಳುತ್ತಾರೆ.
ಗ್ರಾಮಸ್ಥ ನಾಗರಾಜ್ ಮಾತನಾಡಿ, "ಈ ಜಮೀನು ವಾಗಿಶಯ್ಯ ಅವರಿಗೆ ಸೇರಿದೆ. ನಾವು 60 ವರ್ಷಗಳಿಂದ ಓಡಾಡುತ್ತಿರುವ ರಸ್ತೆ ಇದು. ಇದರ ಬಗ್ಗೆ ತಹಶೀಲ್ದಾರ್ ಅವರ ಗಮನಕ್ಕೆ ತಂದಿದ್ದೇವೆ. ಇಲ್ಲಿಯ ತನಕ ಅವರು ಬಂದಿಲ್ಲ. ಜಮೀನು ಅಳತೆ ಮಾಡಿ ರಸ್ತೆ ಅವರಿಗೆ ಸೇರುತ್ತದೆ ಎಂದು ಗುಂಡಿ ತೆಗೆದಿದ್ದಾರೆ. ಇದರಿಂದ ಗ್ರಾಮದಲ್ಲಿ ಮಕ್ಕಳು, ರೈತರಿಗೆ ಸಮಸ್ಯೆಯಾಗುತ್ತಿದೆ" ಎಂದರು.
ಈ ಸಮಸ್ಯೆ ಬಗೆಹರಿಸಲು ತಾಲೂಕು ಆಡಳಿತ ಮಧ್ಯಪ್ರವೇಶ ಮಾಡಲಿ ಎಂದು ಗ್ರಾಮ ಪಂಚಾಯಿತಿ ಸದಸ್ಯ ನಿರಂಜನ್ ಆಗ್ರಹಿಸಿದ್ದಾರೆ. "ನಮಗೆ ಇದೇ ರಸ್ತೆ ಬೇಕೆಂದೇನಿಲ್ಲ, ಬದಲಿಗೆ ಬೇರೆ ರಸ್ತೆ ಮಾಡಿಸಿಕೊಟ್ಟರೂ ಸರಿ. ಇಲ್ಲಿ ಜಮೀನು ಹದ್ಬಸ್ತು ಮಾಡ್ಸಿದ್ದರಿಂದ ರಸ್ತೆ ನಮ್ಮ ಜಮೀನಿನಲ್ಲಿದೆ ಎಂದು ಅವರು ಹೇಳುತ್ತಿದ್ದಾರೆ. ತಹಶೀಲ್ದಾರ್, ಜಿಲ್ಲಾಧಿಕಾರಿ ಆಗಮಿಸಿ ಗ್ರಾಮ ನಕಾಶೆಯಲ್ಲಿ ಎಲ್ಲಿ ರಸ್ತೆ ಬರುತ್ತೋ ಅಲ್ಲೇ ಒಂದು ಗ್ರಾಮಕ್ಕೆ ಒಂದು ರಸ್ತೆ ನಿರ್ಮಿಸಿಕೊಡಬೇಕು" ಎಂದು ಅವರು ಮನವಿ ಮಾಡಿದರು.
ಜಮೀನು ಮಾಲೀಕ ಪ್ರವೀಣ್ ಪ್ರತಿಕ್ರಿಯಿಸಿ, "ನಮ್ಮದು 30 ಗುಂಟೆ ಜಮೀನಿದೆ. ಸರ್ಕಾರದಿಂದಲೇ ಅಳತೆ ಮಾಡಿ ಹದ್ಬಸ್ತ್ ಮಾಡಿಕೊಡಲಾಗಿದೆ. ಅದರಲ್ಲಿ ಈ ಜಮೀನು ಮೂರು ಜನರಿಗೆ ಸಂಬಂಧಿಸಿದೆ. ಆ ಜಮೀನಿನಲ್ಲಿ ರಸ್ತೆ ಬಂದಿದೆ ಎಂದು ಹೇಳಿದ್ದರು. ಅದಕ್ಕೆ ನಾವು ಅಳತೆ ಮಾಡಿಸಿದಾಗ ನಮ್ಮ ಜಮೀನಿನಲ್ಲಿ ರಸ್ತೆ ಇದೆ. ಗ್ರಾಮದ ರಸ್ತೆ ನಕಾಶೆಯಲ್ಲಿ ಬೇರೆ ಕಡೆಗೆ ಇದೆ. ಕಳೆದ ಏಳೆಂಟು ವರ್ಷಗಳಿಂದ ಬೇರೆ ಕಡೆ ರಸ್ತೆ ಇದೆ ತೆಗೆದುಕೊಳ್ಳಿ ಎಂದು ಗ್ರಾಮಸ್ಥರಿಗೆ ಹೇಳಿದ್ದೆವು. ರಸ್ತೆ ಮಾಡಿಕೊಳ್ಳಿ ಎಂದು ನಮ್ಮ ಹಿರಿಯರು ಹೇಳಿ ಪಂಚಾಯತಿ ಮಾಡಿದ್ದರು. ನಮ್ಮ ಬಳಿ ದಾಖಲೆಗಳಿದ್ದು, ಗ್ರಾಮಸ್ಥರ ಬಳಿ ದಾಖಲೆ ಪಡೆದು ಪರಿಶೀಲನೆ ಮಾಡಲಿ. ನಾವು ಕಾನೂನಿಗಿಂತ ದೊಡ್ಡವರಲ್ಲ. ಯಾರು ರಸ್ತೆ ಮಾಡಿಕೊಂಡಿಲ್ಲ. ಆದ್ದರಿಂದ ರಸ್ತೆ ಗುಂಡಿ ತೆಗೆದಿದ್ದೇವೆ" ಎಂದು ತಿಳಿಸಿದರು.
ಇದನ್ನೂ ಓದಿ: ಆಸ್ತಿ ವಿವಾದ: 350ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಕಡಿದು ಹಾಕಿದ ಆರೋಪ