ದಾವಣಗೆರೆ: ಕೃಷಿ ಭೂಮಿಯಲ್ಲಿ ಜವಳಿ ಪಾರ್ಕ್ ನಿರ್ಮಾಣ ಮಾಡ್ತೇವೆ ಎಂದು ಅಧಿಕಾರಿಗಳು ಬಡ ರೈತರ ಜಮೀನುಗಳನ್ನು ವಶಕ್ಕೆ ಪಡೆದಿದ್ದರು. ಅನ್ನ ನೀಡಿದ ತಾಯಿಯನ್ನು ಹೇಗೆ ಬಿಟ್ಟು ಕೊಡಬೇಕೆಂದು ಬಡ ರೈತರು ತಮ್ಮ ಜಮೀನನ್ನು ನೀಡಲು ಹಿಂದೇಟು ಹಾಕಿದ್ದರು. ಆದ್ರೆ ಅದೇಗೋ ರೈತರಿಂದ ಜಮೀನು ಪಡೆದ ಅಧಿಕಾರಿಗಳು ಇಪ್ಪತ್ತು ವರ್ಷಗಳು ಉರುಳಿದರೂ ಆ ಬಡ ರೈತರಿಗೆ ಪರಿಹಾರ ನೀಡದೆ ವಂಚಿಸಿದ್ದಾರೆ.
ದಾವಣಗೆರೆಯಲ್ಲಿ 20 ವರ್ಷಗಳ ಹಿಂದೆಯೇ ಜವಳಿ ಪಾರ್ಕ್ ನಿರ್ಮಾಣ ಮಾಡಬೇಕೆಂದು ಕರೂರು ಗ್ರಾಮದಲ್ಲಿರುವ ರೈತರ ಜಮೀನನ್ನು ಅಧಿಕಾರಿಗಳು ಕೇಳಿದ್ದರು. ಆದರೆ ಅನ್ನ ನೀಡಿದ ಭೂಮಿಯನ್ನು ಹೇಗೆ ಬಿಟ್ಟು ಕೊಡುವುದೆಂದು ಚಿಂತಿಸುತ್ತಿದ್ದ ರೈತರಿಗೆ ಪುಸಲಾಯಿಸಿ ರೈತರಿಂದ ಜಮೀನನ್ನು ಕೆಐಬಿಡಿ ಅಧಿಕಾರಿಗಳು ಪಡೆದಿದ್ದರು. ಆದರೆ ರೈತರಿಂದ ಜಮೀನು ಪಡೆದು 20 ವರ್ಷಗಳು ಕಳೆದರೂ ಕೂಡ ಇಲ್ಲೊಬ್ಬ ರೈತ ಮಹಿಳೆಗೆ ಪರಿಹಾರ ನೀಡದೆ ಸತಾಯಿಸಲಾಗುತ್ತಿದೆ.
ಕರೂರು ಗ್ರಾಮದ ಹಫೀಝಾ ಬಾನುರವರ ತಂದೆಗೆ ಸೇರಿದ 12 ಎಕರೆ ಭೂಮಿಯನ್ನು ಜವಳಿ ಪಾರ್ಕ್ಗೆಂದು ಪಡೆದಿರುವ ಕೆಐಬಿಡಿ ಅಧಿಕಾರಿಗಳು ಕೈಗಾರಿಕಾ ಪ್ರದೇಶಕ್ಕೆ ಬಳಕೆ ಮಾಡಿದ್ದು, ಒಂದು ನಯಾಪೈಸೆ ಹಣವನ್ನು ಹಫೀಝಾ ಬಾನು ಹಾಗೂ ಇನ್ನಿತರರಿಗೆ ತಲುಪಿಸಿಲ್ಲವಂತೆ. ಹಣಕ್ಕಾಗಿ ಎಲ್ಲಾ ಸಚಿವರಲ್ಲಿ, ಮುಖ್ಯಮಂತ್ರಿಗಳ ಮನೆ ಬಾಗಿಲಿಗೆ ತೆರಳಿದ್ರೂ ಪರಿಹಾರ ಮಾತ್ರ ಮರೀಚಿಕೆಯಾಗಿದೆ. ಇದರಿಂದ ಕಂಗ್ಗೆಟ್ಟ ಹಫೀಝಾ ಬಾನುರವರ ಕುಟುಂಬ ಜಿಲ್ಲಾಧಿಕಾರಿ ಕಚೇರಿ ಸಭೆಯಲ್ಲಿ ಪಾಲ್ಗೊಂಡಿದ್ದು, ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಬಳಿ ಪರಿಹಾರ ಹಣ ಕೇಳಿದ್ದಾರೆ. ಆದರೆ ಆಶ್ವಾಸನೆ ಮಾತ್ರ ದೊರೆತಿದೆ ವಿನಃ ಪರಿಹಾರ ಮಾತ್ರ ದೂರದ ಮಾತು.
ಜವಳಿ ಪಾರ್ಕ್ ಜಮೀನಿನಲ್ಲಿ ಕೈಗಾರಿಕಾ ಪ್ರದೇಶ ನಿರ್ಮಾಣ:
ಇಪ್ಪತ್ತು ವರ್ಷಗಳ ಹಿಂದೆ ನೂರಾರು ಎಕರೆ ವಿಶಾಲವಾದ ಕೃಷಿ ಭೂಮಿಯಲ್ಲಿ ಕೆಐಡಿಬಿ ಅಧಿಕಾರಿಗಳು ಜವಳಿ ಪಾರ್ಕ್ ನಿರ್ಮಾಣ ಮಾಡದೆ ಕೈಗಾರಿಕಾ ಪ್ರದೇಶವನ್ನು ನಿರ್ಮಾಣ ಮಾಡಿದ್ದು, ರೈತರ ಆಕ್ರೋಶಕ್ಕೆ ಕಾರಣ ಆಗಿದೆ. ಈಗಾಗಲೇ ಕರೂರು ಕೃಷಿ ಭೂಮಿಯಲ್ಲಿ ಕೈಗಾರಿಕಾ ಪ್ರದೇಶ ತಲೆ ಎತ್ತಿದ್ದು ನೂರಾರು ಫ್ಯಾಕ್ಟರಿಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಭೂಮಿ ನೀಡಿದ ರೈತರಿಗೆ ಮಾತ್ರ ಪರಿಹಾರ ತಲುಪದೆ ಬೀದಿ ಪಾಲಾಗಿದ್ದಾರೆ.
ಜಮೀನಿನಲ್ಲಿ ತಲೆ ಎತ್ತಿದೆ ಭವ್ಯವಾದ ಭವನ:
ಹಫೀಝಾ ಬಾನು ಅವರಿಗೆ ಸೇರಿದ 12 ಎಕರೆ ಪ್ರದೇಶದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಭವ್ಯವಾದ ಜಿಲ್ಲಾಡಳಿತ ಭವನ ತಲೆ ಎತ್ತಿದೆ. 'ಕೃಷಿ ಭೂಮಿಯನ್ನಿಟ್ಟುಕೊಂಡು ಜೀವನ ನಡೆಸುತ್ತಿದ್ದ ಬಡ ರೈತರಿಗೆ ಪರಿಹಾರ ನೀಡದೆ ಬೃಹತ್ ಜಿಲ್ಲಾಡಳಿತ ಭವನ ನಿರ್ಮಾಣ ಆಗಿರುವುದನ್ನು ಕಂಡು ನಮಗೆ ಪರಿಹಾರ ಬರಲ್ಲ ಎಂದು ಮನಗಂಡು ಎಷ್ಟೋ ರೈತರು ಅಸುನೀಗಿದ್ದಾರೆ. ಕೆಲ ರೈತರು ಹಾಸಿಗೆ ಹಿಡಿದಿದ್ದಾರೆ. ಮುಂದಿನ ದಿನಗಳಲ್ಲಿ ಪರಿಹಾರ ದೊರೆಯದೆ, ಅದೇ ಚಿಂತೆಯಲ್ಲಿ ನಮ್ಮ ತಂದೆ ತಾಯಿ ಸಾವನಪ್ಪಿದರೆ, ಇದೇ ಜಿಲ್ಲಾಡಳಿತ ಭವನದ ಮುಂದೆ ಸಮಾಧಿ ಮಾಡಲಾಗುವುದು ಎಂದು ಎಂದು ಹಫೀಝಾ ಬಾನು ಅಳಲುತೋಡಿಕೊಂಡಿದ್ದಾರೆ.
ಪರಿಹಾರದ ಆಶ್ವಾಸನೆ ನೀಡಿದ ಸಚಿವ ಶೆಟ್ಟರ್:
ಜಿಲ್ಲಾಡಳಿತ ಭವದಲ್ಲಿ ನಡೆಯುತ್ತಿದ್ದ ಕೈಗಾರಿಕೆಗಳ ಸಮಸ್ಯೆ ಸಭೆಯಲ್ಲಿ ಭಾಗಿಯಾದ ಹಫೀಝಾ ಬಾನು ಹಾಗು ಕೆಲ ರೈತರು ಪರಿಹಾರ ನೀಡದೆ ಇದಿದ್ದಕ್ಕೆ ಸಚಿವರ ವಿರುದ್ಧ ಗರಂ ಆದರು. ಇದರಿಂದ ಶಾಂತ ಚಿತ್ತರಾಗುವಂತೆ ಒತ್ತಾಯಿಸಿದ ಸಚಿವ ಜಗದೀಶ್ ಶೆಟ್ಟರ್ ಪರಿಹಾರ ಕೊಡಿಸುವುದಾಗಿ ಆಶ್ವಾಸನೆ ನೀಡಿದರು. ಒಂದು ವರ್ಷಗಳಿಂದ ನಾನು ಮಂತ್ರಿಯಾಗಿದ್ದು, 20 ವರ್ಷಗಳದ್ದು ನನಗೆ ಗೊತ್ತಿಲ್ಲ. ಎಲ್ಲ ಸರಿ ಮಾಡುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.