ದಾವಣಗೆರೆ: ಜಿಲ್ಲೆಯಲ್ಲಿ ಮಳೆ ಅಭಾವ ಎದುರಾಗಿರುವುದರಿಂದ ಇಲ್ಲಿನ ರೈತರು ಕಂಗಾಲಾಗಿದ್ದಾರೆ. ಮಳೆ ಇಲ್ಲದೆ ಹೈರಾಣಾಗಿರುವ ರೈತರು ಸಾಲ ಮಾಡಿ ಬೆಳೆದಿರುವ ಬೆಳೆಗಳು ನೆಲಕಚ್ಚಿವೆ. ಭಾನುಹಳ್ಳಿಯಲ್ಲಿ ಸುಮಾರು 1,200 ಎಕರೆ ಪ್ರದೇಶದಲ್ಲಿ ಬೆಳೆದ ಮೆಕ್ಕಜೋಳ ಮಳೆ ಇಲ್ಲದೆ ನೆಲಕಚ್ಚಿದ್ದು ಟ್ರಾಕ್ಟರ್ ಹರಿಸಿ ರೈತರು ನಾಶಪಡಿಸಿದರು.
ಕಳೆದ ತಿಂಗಳು ಧಾರಾಕಾರವಾಗಿ ಸುರಿದಿದ್ದ ಮಳೆ ಇದೀಗ ಗಣನೀಯವಾಗಿ ಇಳಿಕೆಯಾಗಿದೆ. ಇದರಿಂದಾಗಿ ರೈತರು ತಲೆ ಮೇಲೆ ಕೈ ಇಟ್ಟುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ಹರಿಹರ ತಾಲೂಕಿನ ಭಾನುಹಳ್ಳಿಯಲ್ಲಿ ಬೆಳೆದಿದ್ದ ಮೆಕ್ಕೆಜೋಳ ಮಳೆ ಇಲ್ಲದೆ ಒಣಗಿ ಹೋಗಿದೆ. ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರು ಅಸಹಾಯಕರಾಗಿದ್ದಾರೆ. ಬೆಳೆ ಸಂಪೂರ್ಣವಾಗಿ ಒಣಗಿ ಹಳದಿ ಬಣ್ಣಕ್ಕೆ ತಿರುಗಿದ್ದರಿಂದ ದಿಕ್ಕು ತೋಚದೆ ಟ್ರಾಕ್ಟರ್ ಹರಿಸಿದ್ದಾರೆ. ರೈತ ಗುರುಮೂರ್ತಿ ಒಂದು ಎಕರೆಗೆ 25 ಸಾವಿರದಂತೆ ಖರ್ಚು ಮಾಡಿ ಮೆಕ್ಕೆ ಜೋಳ ಬೆಳೆದಿದ್ದರು. ಮೆಕ್ಕೆ ಜೋಳ ಫಸಲು ಕೈ ಸೇರುವ ಹಂತದಲ್ಲಿ ಮಳೆ ಕೈಕೊಟ್ಟಿದೆ.
ಈ ಬಗ್ಗೆ ಮಾತನಾಡಿದ ಗುರುಮೂರ್ತಿ, ಒಂದು ಎಕರೆ ಉಳುಮೆ ಮಾಡಲು ಸುಮಾರು 25 ಸಾವಿರ ಖರ್ಚು ಮಾಡಲಾಗಿದೆ. ಜಿಲ್ಲೆಯಲ್ಲಿ ಸಾವಿರಾರು ಎಕರೆಯಲ್ಲಿ ಹಾಕಿದ ಮೆಕ್ಕೆಜೋಳ ನೆಲಕಚ್ಚಿದೆ. ಅಲ್ಲದೆ ಉಳುಮೆ ಮಾಡಲು 25ಕ್ಕೂ ಹೆಚ್ಚು ಲೀಟರ್ ಡೀಸೆಲ್ ಕೂಡ ಬೇಕಾಗುತ್ತದೆ. ಮಳೆ ಕೈ ಕೊಟ್ಟಿದ್ದರಿಂದ ಸಮಸ್ಯೆ ಉಂಟಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕೆಂದು ಒತ್ತಾಯಿಸಿದರು.
ಕೆಲ ರೈತರು ಜಮೀನನ್ನು ಗೇಣಿಗೆ ಪಡೆದು ಕೃಷಿ ಮಾಡುತ್ತಿದ್ದು, ಬೆಳೆ ನಷ್ಟದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗೇಣಿ ಪಡೆದ ಒಂದು ಎಕರೆಗೆ ತಲಾ 7 ಸಾವಿರ ರೂಪಾಯಿಯಂತೆ ಜಮೀನು ಮಾಲೀಕರಿಗೆ ಪಾವತಿ ಮಾಡಬೇಕಿದೆ. ಆದರೆ ಮೆಕ್ಕೆಜೋಳ ಬೆಳೆದು ನಷ್ಟ ಉಂಟಾಗಿರುವುದರಿಂದ ಮಾಲೀಕರಿಗೆ ಗೇಣಿ ಪಾವತಿ ಮಾಡಲು ಕಷ್ಟವಾಗಿದೆ.
ರೈತ ರಾಜು ಪ್ರತಿಕ್ರಿಯಿಸಿ, ನಾವು ಬೇರೆಯವರ ಜಮೀನನ್ನು ಗೇಣಿ ಪಡೆದು ವ್ಯವಸಾಯ ಮಾಡುತ್ತಿದ್ದೇವೆ. ಒಂದು ಎಕರೆಗೆ 7 ಸಾವಿರ ರೂಪಾಯಿಯನ್ನು ಜಮೀನಿನ ಮಾಲೀಕನಿಗೆ ನೀಡುತ್ತಿದ್ದೇವೆ. ಈ ಬಾರಿ ಮಳೆ ಕಡಿಮೆಯಾಗಿರುವುದರಿಂದ ಸಮಸ್ಯೆ ಆಗಿದೆ. ಇಡೀ ಮೆಕ್ಕೆಜೋಳ ಬೆಳೆ ಒಣಗಿದ್ದು, ಬೆಳೆ ತೆಗೆಯುವ ಸಮಯದಲ್ಲೇ ಈ ರೀತಿ ಆಗಿರುವುದರಿಂದ ಬೆಳೆಯನ್ನು ನಾಶ ಪಡಿಸಿದ್ದೇವೆ. ಬೆಳೆ ಪರಿಹಾರ ಕಟ್ಟುತ್ತಿದ್ದರೂ ನಮಗೆ ಇದುವರೆಗೂ ಯಾವುದೇ ಪರಿಹಾರ ಲಭ್ಯವಾಗಿಲ್ಲ ಎಂದು ಅಳಲು ತೋಡಿಕೊಂಡರು.
1,200 ಎಕರೆ ಪ್ರದೇಶದಲ್ಲಿ ಮೆಕ್ಕೆ ಜೋಳ ನೆಲಕಚ್ಚಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ರೈತರು ಆರೋಪಿಸಿದರು. ತಕ್ಷಣ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬೆಳೆ ಪರಿಹಾರವನ್ನು ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದರು.
ಇದನ್ನೂ ಓದಿ : ಕಾಡು ಪ್ರಾಣಿಗಳ ದಾಳಿಗೆ ಬೆಳೆ ನಾಶ.. ಸಂಕಷ್ಟದಲ್ಲಿರುವ ನಮಗೆ ರಕ್ಷಣೆ ನೀಡಿ ಎನ್ನುತ್ತಿರುವ ಅನ್ನದಾತ