ದಾವಣಗೆರೆ : ಆಹಾರ ಕಿಟ್ ವಿತರಣೆ ವೇಳೆ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ಕಟ್ಟಡ ಕಾರ್ಮಿಕರು ರಸ್ತೆಯಲ್ಲಿ ಕುಳಿತು ಆಕ್ರೋಶ ವ್ಯಕ್ತಪಡಿಸಿದ ಘಟನೆ ಕೆಟಿಜೆ ನಗರದ ಸೋಮೇಶ್ವರ ವಿದ್ಯಾಲಯದಲ್ಲಿ ನಡೆದಿದೆ.
ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ಎಸ್. ಎ. ರವೀಂದ್ರನಾಥ ಅವರಿಂದ ಕಾರ್ಮಿಕರಿಗೆ ಕಳೆದ ಮೂರು ದಿನಗಳಿಂದ ಆಹಾರ ಕಿಟ್ ವಿತರಣೆ ಮಾಡಲಾಗುತ್ತಿದೆ. ಆದ್ರೆ, ಕೆಲವರಿಗೆ ಮಾತ್ರ ನೀಡಲಾಗುತ್ತಿದೆ. ಇನ್ನು ಕೆಲವರಿಗೆ ಕುಂಟು ನೆಪವೊಡ್ಡಿ, ಕಾರ್ಡ್ ತೋರಿಸಿ ಎಂದು ಹೇಳಿ ಕಿಟ್ ಕೊಡುತ್ತಿಲ್ಲ ಎಂಬುದು ಕಾರ್ಮಿಕರ ಆರೋಪ.
ಇಂದು ಸಹ ಕಿಟ್ ವಿತರಣೆ ಮಾಡಲಾಗುತ್ತಿದೆ, ಆದ್ರೆ ಸರಿಯಾದ ಮಾಹಿತಿ ನೀಡಿರಲಿಲ್ಲ. ಈ ವೇಳೆ, ಸಾಮಾಜಿಕ ಅಂತರ ಮರೆತು ಒಂದೇ ಕಡೆ ನೂರಾರು ಜನರು ಸೇರಿದ್ದರು. ಬೆಳಗ್ಗೆ 6 ಗಂಟೆಯಿಂದಲೇ ಕಟ್ಟಡ ಕಾರ್ಮಿಕರು ಕಾದು ಕುಳಿತಿದ್ದರು. ಕಿಟ್ ಸಿಗದೇ ಇರುವುದಕ್ಕೆ ನಿರಾಸೆ ವ್ಯಕ್ತಪಡಿಸಿದರು. ಕೊನೆಗೆ ಸಿಟ್ಟಿಗೆದ್ದು ರಸ್ತೆ ಮಧ್ಯೆ ಕುಳಿತು ಕಾರ್ಮಿಕರು ಪ್ರತಿಭಟನೆ ನಡೆಸಿದರು.
ಕೆಲಕಾಲ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತಲ್ಲದೇ, ಸಂಚಾರ ಬಂದ್ ಆಗಿತ್ತು. ಬಳಿಕ ಪೊಲೀಸರಿಂದ ಮನವೊಲಿಕೆ ಯತ್ನ ನಡೆಯಿತು. ಮಾತು ಕೇಳದಿದ್ದಾಗ ಪೊಲೀಸರು ಬೆದರಿಸಿ ಕಳುಹಿಸಿದರು.