ದಾವಣಗೆರೆ: ಕೋಡಿಹಳ್ಳಿ ಚಂದ್ರಶೇಖರ್ ದಲ್ಲಾಳಿಗಳ ಮುಖ್ಯಸ್ಥ ಎಂದು ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನೀನು ನಿಜವಾದ ರೈತ ನಾಯಕನಾಗಿದ್ದರೆ ರೈತರ ಪರ ಹೋರಾಟ ಮಾಡು. ರೈತಪರ ಹೋರಾಟ ಮಾಡುವ ವೇಳೆ ಹಸಿರು ಶಾಲು ಹಾಕಿಕೊಂಡು ಅಲ್ಲಿ ನಾನು ರೈತ ಪರ ಎನ್ನುತ್ತೀಯ. ಇಲ್ಲಿ ಸಾರಿಗೆ ನೌಕರರ ಪ್ರತಿಭಟನೆಗೂ ಜೊತೆಗೂಡುತ್ತೀಯ. ನಿನಗೂ ಹಾಗು ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನೌಕರರಿಗೂ ಏನು ಸಂಬಂಧ?' ಎಂದು ಅವರು ಪ್ರಶ್ನಿಸಿದರು.
'ಸಾರಿಗೆ ನೌಕರರೇ ಇಂತಹವರೊಂದಿಗೆ ಪ್ರತಿಭಟನೆ ಮಾಡಬೇಡಿ. ನಿಮ್ಮೊಂದಿಗೆ ಸಿಎಂ ಹಾಗೂ ಸಾರಿಗೆ ಸಚಿವರಿದ್ದಾರೆ ಅವರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳಿ. ಅದನ್ನು ಬಿಟ್ಟು ಸಂಘಟಿತ ದಲ್ಲಾಳಿಗಳ ಮುಖ್ಯಸ್ಥ ಎಂದು ಹೇಳಿಕೊಂಡು ಮೊಸಳೆ ಕಣ್ಣೀರು ಹಾಕಿಕೊಂಡು ನಿಮ್ಮೊಂದಿಗೆ ಪ್ರತಿಭಟನೆ ಮಾಡುತ್ತಿದ್ದಾರಲ್ಲ, ಇವರಿಂದ ನಿಮ್ಮ ಸಮಸ್ಯೆ ಬಗೆಹರಿಯೋದಿಲ್ಲ' ಎಂದರು.
'ಸಮಸ್ಯೆಯ ಬೆಂಕಿಗೆ ಪೆಟ್ರೋಲ್ ಹಾಕಿ ಇನ್ನಷ್ಟು ಉರಿಸುವ ಕೆಲಸವನ್ನು ಕೋಡಿಹಳ್ಳಿ ಮಾಡುತ್ತಿದ್ದಾರೆ. ಐದು ವರ್ಷಗಳ ಕಾಲ ಅಧಿಕಾರ ಚಲಾಯಿಸಿದ ಸಿದ್ದರಾಮಯ್ಯನವರ ಸರ್ಕಾರದ ಅವಧಿಯಲ್ಲಿ ಸಾವಿರಾರು ರೈತರ ಆತ್ಮಹತ್ಯೆಗಳಾದವು. ಅಂದು ಧ್ವನಿ ಎತ್ತದ ಕೋಡಿಹಳ್ಳಿ ಚಂದ್ರಶೇಖರ್ ರೈತ ನಾಯಕನಾಗಲು ನಾಲಾಯಕ್' ಎಂದು ಕಿಡಿಕಾರಿದರು.