ಹರಿಹರ: ನಾನು ಕೃಷಿಯಲ್ಲಿ ತೊಡಗಿಕೊಂಡು ಕಡಿಮೆ ನೀರಿನಲ್ಲಿ ವಿವಿಧ ಬೆಳೆಗಳನ್ನು ಬೆಳೆದಿರುವುದನ್ನ ನೋಡಿ ನೂರಾರು ರೈತರು ಕೃಷಿಯತ್ತ ವಾಲುವಂತೆ ಮಾಡಿರುವುದೇ ನನ್ನ ಜೀವನದ ಸಾಧನೆಯಾಗಿದೆ. ರೈತರು ಕೃಷಿಯಲ್ಲಿಯೇ ಜೀವನ ಕಟ್ಟಿಕೊಳ್ಳಬೇಕು ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ರೈತ ಮಹಿಳೆ ಕವಿತಾ ಮಿಶ್ರಾ ಮಹಿಳೆಯರಿಗೆ ಕರೆ ನೀಡಿದರು.
ತಾಲೂಕಿನ ರಾಜನಹಳ್ಳಿ ಗ್ರಾಮದ ಮಹರ್ಷಿ ವಾಲ್ಮೀಕಿ ಪೀಠದ ಆವರಣದಲ್ಲಿ ನಡೆದ ಎರಡನೇ ವರ್ಷದ ವಾಲ್ಮೀಕಿ ಜಾತ್ರೆಯ ರಾಜ್ಯ ಮಟ್ಟದ ಮಹಿಳಾ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ನನ್ನ ವ್ಯಾಸಂಗ ಮುಗಿದ ನಂತರ ನನ್ನ ಪೋಷಕರು ರೈತ ಕುಟುಂಬಕ್ಕೆ ಮದುವೆ ಮಾಡಿಕೊಟ್ಟರು. ನಂತರ ನನ್ನ ಗಂಡನ ಜೊತೆ ಬೆಂಗಳೂರಿಗೆ ಹೋಗಿ ಕೆಲಸಕ್ಕಾಗಿ ಕೆಲವು ಕಂಪನಿಗೆ ಅಪ್ಲಿಕೇಷನ್ ಹಾಕಿದಾಗ, 40 ಸಾವಿರ ರೂ. ವೇತನ ಸಂಬಳದ ಕೆಲಸ ದೊರೆಯಿತು. ಆದರೆ, ಸಾಂಪ್ರದಾಯಿಕ ಕುಟುಂಬಕ್ಕೆ ಸೊಸೆಯಾಗಿ ಹೋದಂತಹ ನನ್ನನ್ನು ಬೆಂಗಳೂರಿಗೆ ಕೆಲಸ ಮಾಡಲು ಕಳಿಸಲು ನನ್ನ ಗಂಡ ಒಪ್ಪಲಿಲ್ಲ. ಓದಿದ ಹೆಣ್ಣುಮಕ್ಕಳು ತೋಟದಲ್ಲಿ ಕೆಲಸ ಮಾಡುವುದಿಲ್ಲ ಎಂದು ಹೇಳುತ್ತಾರೆ. ಆದರೆ ನೀನು ತೋಟದಲ್ಲಿ ಕೆಲಸ ಮಾಡಿ ಆ ಮಾತನ್ನು ಸುಳ್ಳಾಗಿಸು ಎಂದು ನನ್ನ ಪತಿ ಮಾರ್ಗದರ್ಶನ ನೀಡಿದರು. ಆಗ ನಾನು ನಿರ್ಧರಿಸಿದಂತಹ ನಿರ್ಧಾರ ಇಂದು ನನ್ನನ್ನು ದೊಡ್ಡ ಮಟ್ಟಕ್ಕೆ ಕರೆದುಕೊಂಡು ಹೋಗಿದೆ ಎಂದರು.
ಬಂಜರು ಭೂಮಿಯಲ್ಲಿ ಬೆಳೆ ಬೆಳೆಯುವಂತಹ ದೊಡ್ಡ ಸವಾಲು ನನ್ನ ಮುಂದಿತ್ತು. ಆದ್ರೆ ಅಲ್ಲೇ ಕೃಷಿ ಮಾಡಲು ನಿರ್ಧರಿಸಿ, ಬಂಜರು ಭೂಮಿಯನ್ನು ಕೃಷಿಗೆ ಸಿದ್ಧಪಡಿಸಿದೆವು. ನಂತರ ಜಮೀನಿನಲ್ಲಿ ಬೋರ್ವೆಲ್ ಕೊರೆಸಿದೆ. ದೇವರ ದಯೆಯಿಂದ ಒಂದೂವರೆ ಇಂಚು ನೀರು ಲಭ್ಯವಾಯಿತು. ನಂತರ ದಾಳಿಂಬೆ ಬೆಳೆ ಬೆಳೆದ ನಾನು ಸ್ವಲ್ಪ ಸಮಯ ಬೆಳೆ ಕೈ ಹಿಡಿದರೂ ಕೂಡ, ಒಂದೇ ಸಲ ಬೆಟ್ಟದಿಂದ ಕೆಳಗೆ ಜಾರಿ ಬಿಡುವ ಹಾಗೆ ಕೈಕೊಟ್ಟಿತ್ತು. ನಂತರ ನನ್ನ ಸಹಾಯಕ್ಕಾಗಿ ನನ್ನ ಕುಟುಂಬ ಹಾಗೂ ಸ್ನೇಹಿತರು ಕೂಡ ಮುಂದೆ ಬರಲಿಲ್ಲ. ಆಗ ನಾನು ಎಲ್ಲವನ್ನೂ ಕಳೆದುಕೊಂಡು ಖಾಲಿ ಕೈಯಲ್ಲಿ ಇದ್ದೆ. ಆಗ ನನ್ನ ಪತಿ ಕೈ ಹಿಡಿದಿದ್ದರಿಂದ ಈ ರೀತಿಯ ದೊಡ್ಡ ಸಾಧನೆ ಮಾಡಲು ಪ್ರೇರೇಪಿಸಿದರು ಎಂದು ತಿಳಿಸಿದರು.
ನನ್ನ 10 ಎಕರೆ ಬರಡು ಭೂಮಿಯಲ್ಲಿ ಸಾವಯವ ಕೃಷಿ ಹಾಗೂ ಹನಿ ನೀರಾವರಿ ಮೂಲಕ 2100 ಶ್ರೀಗಂಧ, 1500 ದಾಳಿಂಬೆ, 90 ಮಾವು, 300 ನಿಂಬೆ, 800 ಸೀಬೆ, 150 ನೇರಳೆ, 150 ಬೆಟ್ಟದ ನೆಲ್ಲಿಕಾಯಿ, 150 ನುಗ್ಗೆ, 100 ಕರಿಬೇವು, 100 ಮಲ್ಲಿಗೆ, 100 ತೆಂಗು, 450 ಸೀತಾಫಲ ಜೊತೆಗೆ ಮೂಸಂಬಿ, ಸಪೋಟ, ಬಾಳೆಹಣ್ಣು, ಮತ್ತಿ, ರಕ್ತಚಂದನ, ಕಾಫಿ, ಮೆಣಸು, ಅರಿಶಿಣ ಸೇರಿದಂತೆ ನಾನಾ ವಿಧದ ಗಿಡ ಬೆಳೆಸಿದ್ದೇನೆ. ನನ್ನ ಈ ಕಾರ್ಯವನ್ನು ನೋಡಿ ನೂರಾರು ರೈತರು ಕೃಷಿಯತ್ತ, ಅದರಲ್ಲೂ ಶ್ರೀಗಂಧ ಕೃಷಿಯತ್ತ ವಾಲುವಂತೆ ಮಾಡಿದ್ದೇನೆ. ಇದೇ ನನ್ನ ಜೀವನ ಸಾಧನೆ ಎಂದು ತಮ್ಮ ಜೀವನದ ಬೆಳೆವಣಿಗೆಯನ್ನು ಹೇಳಿಕೊಂಡರು.