ದಾವಣಗೆರೆ: ಜಿಲ್ಲೆಯ ಹರಿಹರ ವಿಧಾನಸಭಾ ಕ್ಷೇತ್ರ ಹೆಚ್ ಶಿವಪ್ಪನವರ ಕಾಲದಿಂದಲೂ ಜೆಡಿಎಸ್ ನ ಭದ್ರಕೋಟೆ. ಅವರ ಅಕಾಲಿಕ ಮರಣದ ನಂತರ ಅವರ ಪುತ್ರ ಹೆಚ್ ಎಸ್ ಶಿವಶಂಕರ್ ಕ್ಷೇತ್ರದಲ್ಲಿ ಹಿಡಿತ ಸಾಧಿಸಿ ಶಾಸಕರಾದರು. ಆದರೆ ಜೆಡಿಎಸ್ ಭದ್ರಕೋಟೆಯಾಗಿದ್ದ ಹರಿಹರ ಕ್ಷೇತ್ರ 2018 ರ ಚುನಾವಣೆಯಲ್ಲಿ ಜೆಡಿಎಸ್ನ್ನು ತಿರಸ್ಕರಿಸಿ ಕಾಂಗ್ರೆಸ್ ನ ಕೈ ಹಿಡಿದಿದ್ದರು. ಕ್ಷೇತ್ರವನ್ನು ಕಳೆದುಕೊಂಡಿದ್ದ ಜೆಡಿಎಸ್ ಪಕ್ಷ ಇದೀಗ ಮತ್ತೇ ಹರಿಹರ ಮತ ಕ್ಷೇತ್ರದಲ್ಲಿ ಹಿಡಿತ ಸಾಧಿಸಲು ಪಂಚರತ್ನ ಯಾತ್ರೆ ಕೈಗೊಂಡಿದೆ.
ಹರಿಹರ ಕ್ಷೇತ್ರವನ್ನು ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಮಾಜಿ ಸಿಎಂ ಕುಮಾರಸ್ವಾಮಿ ಅವರು ಪಂಚರತ್ನ ಯಾತ್ರೆ ಕೈಗೊಂಡಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 24 ಹಳ್ಳಿಗಳನ್ನು ತಮ್ಮ ಜೆಡಿಎಸ್ ಪಂಚರತ್ನ ಯಾತ್ರೆ ಮುಖೇನ ಸಂಚರಿಸಿ ಅಭ್ಯರ್ಥಿಯಾದ ಮಾಜಿ ಶಾಸಕ ಹೆಚ್ಎಸ್ ಶಿವಶಂಕರ್ ಅವರನ್ನು ಗೆಲ್ಲಿಸುವಂತೆ ಮತದಾರರಿಗೆ ಮನವಿ ಮಾಡಿದರು. ಜಿಲ್ಲೆಯ ಹರಿಹರ ತಾಲೂಕಿನ ಕೊಂಡಜ್ಜಿ ಗ್ರಾಮದಿಂದ ಆರಂಭವಾದ ಪಂಚರತ್ನ ಯಾತ್ರೆ ಕರ್ಲಹಳ್ಳಿ, ಗುತ್ತೂರು, ಬೆಳ್ಳೂಡಿ, ಎಕ್ಕೆಗುಂದಿ, ಭಾನುವಳ್ಳಿ ಬನ್ನಿಕೋಡಿಗೆ ಮೊದಲ ದಿನದ ಯಾತ್ರೆ ಸಂಪನ್ನಗೊಂಡಿತು. ಈ ವೇಳೆ ಹೆಚ್ಡಿಕೆ ಜನಸಾಮಾನ್ಯರ ಸಮಸ್ಯೆ ಆಲಿಸಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಇನ್ನು ಸಾಕಷ್ಟು ಕಡೆ ಪಂಚರತ್ನ ಯಾತ್ರೆ ಸಾಗಲಿದ್ದು, ಹಾಸನ ಮೈಸೂರುನಲ್ಲಿ ಕೊನೆಯಾಗಲಿದೆ. ಎರಡನೇ ಪಟ್ಟಿಯನ್ನು ಫೆ.4 ರಂದು ಬಿಡುಗಡೆ ಮಾಡಲಿದ್ದು, ಚುನಾವಣೆಗೆ ಸಿದ್ಧವಾಗಿದ್ದೇವೆ ಎಂದರು.
ಹೆಚ್ ಡಿ ಕುಮಾರಸ್ವಾಮಿ ಮತ್ತೊಮ್ಮೆ ಸಿಎಂ ಆಗಬೇಕು.. ವೇಮಾನಂದ ಶ್ರೀ : ಜಿಲ್ಲೆಯ ಹರಿಹರ ತಾಲ್ಲೂಕಿನ ಹೊಸಹಳ್ಳಿಯ ವೇಮಾನಂದ ಮಠಕ್ಕೆ ಭೇಟಿ ನೀಡಿದ ಕುಮಾರಸ್ವಾಮಿಯವರು ವೇಮಾನಂದ ಶ್ರೀಗಳಿಂದ ಆಶೀರ್ವಾದ ಪಡೆದರು. ಆಶೀರ್ವಾದ ನೀಡಿದ ಬಳಿಕ ಮಾತನಾಡಿದ ಶ್ರೀಗಳು, ರೈತರ ಸಾಲ ಮನ್ನಾ ಮಾಡಿದ ಮೊದಲ ಮುಖ್ಯಮಂತ್ರಿಗಳು ಹೆಚ್ ಡಿಕೆ. ನಮ್ಮ ಮಠಕ್ಕೆ ಅವರ ಅಧಿಕಾರಾವಧಿಯಲ್ಲಿ 4 ಕೋಟಿ ಅನುದಾನ ನೀಡಿದ್ದಾರೆ. ಸಾವಿರಾರು ಮಕ್ಕಳು ವಿದ್ಯಾಭ್ಯಾಸಕ್ಕೆ ನೆರವಾಗಿದ್ದಾರೆ. ನಿಮ್ಮ ಚಿಂತನೆ ನಡೆ ನುಡಿ ರಾಜ್ಯದ ಭವಿಷ್ಯಕ್ಕೆ ಬೇಕು. ರೈತರ ಬಗ್ಗೆ ಕಾಳಜಿ ಹೊಂದಿರುವ ನೀವು ಮತ್ತೊಮ್ಮೆ ಸಿಎಂ ಆಗಬೇಕೆಂದು ಹೇಳಿದರು.
ಎರಡನೇ ದಿನದ ಪಂಚರತ್ನಯಾತ್ರೆಯನ್ನು ಬನ್ನಿಕೋಡು ಗ್ರಾಮದಿಂದ ಮತ್ತೇ ಆರಂಭಿಸಿದ ಹೆಚ್ಡಿಕೆ, ಬೇವಿನಹಳ್ಳಿ, ಮಿಟ್ಲೇಕಟ್ಟೆ, ದೇವರಬೆಳಕೆರೆ, ಕುಣೆಬೆಳಕೆರೆ, ನಿಟ್ಟೂರು, ಮಲೇಬೆನ್ನೂರು ಆಗಮಿಸಿ ಬೃಹತ್ ಮೆರವಣಿಗೆ ಮಾಡಲಾಯಿತು. ಮಲೇಬೆನ್ನೂರಿನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿಯವರಿಗೆ ಅದ್ದೂರಿ ಸ್ವಾಗತ ಕೋರಲಾಯಿತು. ಬಳಿಲ ಜಿಗಳಿ, ಜಿ.ಬೇವಿನಹಳ್ಳಿ, ಕೊಕ್ಕನೂರು ಹಿಂಡಸಘಟ್ಟ, ಗೋವಿನಹಾಳ್, ವಾಸನ, ಕಡರನಾಯಕನಹಳ್ಳಿ, ಹೊಳೆಸಿರಿಗೆರೆ, ಕಮಲಪುರ, ಹೊಸಳ್ಳಿಯಲ್ಲಿ ಬೃಹತ್ ರೋಡ್ ಶೋ ನಡೆಸಲಾಯಿತು. ಪ್ರತಿ ಹಳ್ಳಿಯಲ್ಲೂ ಕೂಡ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಜನರಿಗೆ ಹೇಳಲಾಯಿತು. ಬಳಿಕ ಸಂಜೆ ಹರಿಹರ ನಗರದ ಗಾಂಧಿ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಿತು.
ಬಿಜೆಪಿ ಸರ್ಕಾರದ ವಿರುದ್ಧ ಇಬ್ರಾಹಿಂ ವಾಗ್ದಾಳಿ : ಸಮಾವೇಶದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿ ಮತ್ತು ಕಾಂಗ್ರೆಸ್ ಮಣ್ಣುಮುಕ್ಕಿದೆ. ಬಿಜೆಪಿಯವರು ಟೋಪಿ ಹಾಕುತ್ತಿದ್ದಾರೆ. ಎರಡು ತಿಂಗಳಲ್ಲಿ ನಿಮ್ಮ ಸರ್ಕಾರ ಇರಲ್ಲ. ಅಪ್ಪರ್ ಭದ್ರಾಗೆ 5300 ಕೋಟಿ ಎಲ್ಲಿಂದ ಕೊಡ್ತಿರಾ ಎಂದು ಪ್ರಶ್ನಿಸಿದರು. ಮೋದಿಯ ಅಚ್ಛೇ ದಿನ್ ಬೇಡ, ನಮಗೆ ಹಳೆ ದಿನ ಕೊಟ್ರೇ ಸಾಕಯ್ಯ. ನಮ್ಮವ್ವ ನಿರ್ಮಲಾ ಸೀತಾರಾಮನ್ ಯಾವ ಘಳಿಗೇಲಿ ಬಂದ್ಯವ್ವ. ಏನ್ ಬಜೆಟ್ ಕೊಟ್ಯವ್ವ ಎಂದು ಸಿಎಂ ಇಬ್ರಾಹಿಂ ವ್ಯಂಗ್ಯವಾಡಿದರು.
ಯಡಿಯೂರಪ್ಪಗೆ ಮೋದಿ ಚಿಂತೆ, ಸಿದ್ದರಾಮಯ್ಯಗೆ ಸೋನಿಯ ಚಿಂತೆ, ಆದರೆ ಕುಮಾರಣ್ಣಂಗೆ ರೈತರ ಚಿಂತೆ: ಮಾಜಿ ಸಿಎಂ ಯಡಿಯೂರಪ್ಪಗೆ ಮೋದಿ ಚಿಂತೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಸೋನಿಯ ಚಿಂತೆ, ಅದ್ರೇ ಕುಮಾರಣ್ಣನಿಗೆ ರೈತರ ಚಿಂತೆ ಎಂದು ಇಬ್ರಾಹಿಂ ಹೇಳಿದರು. ಯಡಿಯೂರಪ್ಪನವರಿಗೆ ವಯಸ್ಸಾಗಿದ್ದು, ಅವರನ್ನು ಮತ್ತೇ ಚುನಾವಣೆಗೆ ಕರೆತಂದಿದ್ದಾರೆ ಎಂದರು. ಈ ಎರಡು ಪಕ್ಷಗಳು ಜೈಲ್ ಬೇಲ್ ಸರ್ಕಾರ. ಕೆಲ ಕಾಂಗ್ರೆಸ್ ಬಿಜೆಪಿ ಪಕ್ಷದ ನಾಯಕರು ಜೈಲಿನಲ್ಲಿದ್ರೇ ಇನ್ನೂ ಕೆಲವರು ಬೇಲ್ ನಲ್ಲಿದ್ದಾರೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಬಿಡ್ತಿನಿ ಅಂತಾನೆ. ಅವು ಎಷ್ಟು ಸಿಡಿಗಳಿವೆ, ಆ ಎಲ್ಲಾ ಸಿಡಿಗಳ ವಿರುದ್ಧ ತನಿಖೆ ಆಗ್ಬೇಕಾಗಿದೆ ಎಂದು ಹೇಳಿದರು.
ಸಿದ್ದರಾಮಯ್ಯಗೆ ಕ್ಷೇತ್ರ ಸಿಗುತ್ತಿಲ್ಲ : ರಾಜ್ಯದ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರಿಗೆ ಕ್ಷೇತ್ರ ಸಿಗುತ್ತಿಲ್ಲ. ಕೋಲಾರದಲ್ಲಿ 60 ಸಾವಿರ ಮುಸ್ಲಿಂ ಮತದಾರರಿದ್ದಾರೆ. ಆದರೆ ಸಿದ್ದರಾಮಯ್ಯ ಸಭೆ ಕರೆದಿದ್ದಾಗ ಸಭೆಗೆ ಕೇವಲ ಇನ್ನೂರು ಜನ ಮುಸ್ಲಿಂ ಜನ ಬಂದಿದ್ದರು. ಅಲ್ಲೂ ಸಿದ್ದರಾಮಯ್ಯಗೆ ನೆಲೆ ಇಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಬಿಜೆಪಿಯ ಅಂತ್ಯ ಹಾಡಬೇಕಾಗಿದೆ. ಜೆಡಿಎಸ್ ಗೆಲ್ಲಿಸಬೇಕಾಗಿದೆ ಎಂದರು.
ಕೇಂದ್ರ ಸರ್ಕಾರ ರಾಜ್ಯಕ್ಕೆ ಘೋಷಣೆ ಮಾಡಿದ ಕಾರ್ಯಕ್ರಮಗಳ ಮೇಲೆ ನನಗೆ ನಂಬಿಕೆ ಇಲ್ಲ: ಕೇಂದ್ರ ಸರ್ಕಾರ ರಾಜ್ಯಕ್ಕೆ ಘೋಷಣೆ ಮಾಡಿದ ಕಾರ್ಯಕ್ರಮಗಳ ಮೇಲೆ ನನಗೆ ನಂಬಿಕೆ ಇಲ್ಲ ಎಂದು ಕೇಂದ್ರ ಬಜೆಟ್ ಬಗ್ಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ಜಿಲ್ಲೆಯ ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಘೋಷಣೆ ಮಾಡುವ ಯೋಜನೆಗಳು ರಾಜ್ಯಕ್ಕೆ ಅನುಕೂಲ ಆಗುವುದಿಲ್ಲ. ರಾಜ್ಯದಲ್ಲಿ ಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಜನ ತಿರಸ್ಕರಿಸಿದ್ರೆ ಆ ಯೋಜನೆ ಅನುಷ್ಠಾನಕ್ಕೆ ಬರುವುದಿಲ್ಲ. ಹಣ ಕೂಡ ಬಿಡುಗಡೆಯಾಗುವುದಿಲ್ಲ. ರಾಜ್ಯದಲ್ಲಿ ಚುನಾವಣೆ ಇರುವ ಕಾರಣ ಈ ಕೇಂದ್ರ ಸರ್ಕಾರ ಯೋಜನೆಗಳನ್ನು ಘೋಷಣೆ ಮಾಡಿದೆ. ಜನರನ್ನು ಮರಳು ಮಾಡಲು ಬಜೆಟ್ನಲ್ಲಿ ಕೆಲ ಯೋಜನೆಗಳನ್ನು ಘೋಷಿಸಿದ್ದಾರೆ ಎಂದರು.
ರಾಜ್ಯಕ್ಕೆ ಸಂಬಂಧಿಸಿದಂತೆ ನೀರಾವರಿ, ಅಭಿವೃದ್ಧಿ ಕಾರ್ಯಕ್ರಮಗಳು ಈ ಬಜೆಟ್ನಲ್ಲಿ ಘೋಷಣೆಯಾದ ಬಳಿಕ ಮುಂದಿನ ಚುನಾವಣೆ ಬರಲಿದೆ. ಆಗ ರಾಜ್ಯದಲ್ಲಿ ಕೋಡ್ ಆಫ್ ಕಂಡೆಕ್ಟ್ ಇರುತ್ತದೆ. ಬಜೆಟ್ನಲ್ಲಿ ಘೋಷಣೆ ಮಾಡಿದ ಕಾರ್ಯಕ್ರಮಗಳು ನೆರವೇರಿಸಲು ಬರುವುದಿಲ್ಲ. ಎಂಟು ವರ್ಷದಲ್ಲಿ ಕೇಂದ್ರ ಸರ್ಕಾರ ಬಜೆಟ್ ಯೋಜನೆಗಳನ್ನು ಘೋಷಣೆ ಮಾಡಿ ಚುನಾವಣೆ ಇರುವ ಕಾರಣ ಜನರನ್ನು ಮೆಚ್ಚಿಸಲು ಈ ರೀತಿ ತಂತ್ರ ಮಾಡ್ತಿದ್ದಾರೆ ಎಂದು ಹೇಳಿದರು. ಇದೇ ವೇಳೆ, ಮನೆ ನಿರ್ಮಾಣ ಮಾಡಲು 5 ಲಕ್ಷ ಕೊಡ್ತೀವಿ. ಕೋವಿಡ್ನಲ್ಲಿ ತೀರಿಕೊಂಡವರಿಗೆ 1 ಲಕ್ಷ, ಕೋವಿಡ್ ವಾರಿಯರ್ ಗಳಿಗೆ 30 ಲಕ್ಷ ಕೊಡ್ತೀವಿ ಅಂದ್ರು. ಏನಾದರೂ ಕೊಟ್ರಾ? ಎಂದು ಕುಮಾರಸ್ವಾಮಿ ಕೇಳಿದರು.
ಇದನ್ನೂ ಓದಿ : ಜೆಡಿಎಸ್ ಅಧಿಕಾರಕ್ಕೆ ಬಂದ್ರೆ ಹಿರಿಯ ನಾಗರಿಕರಿಗೆ 5000 ರೂ ಮಾಶಾಸನ, ಮಹಿಳಾ ಸಂಘಗಳ ಸಾಲಮನ್ನಾ: ಹೆಚ್ಡಿಕೆ