ದಾವಣಗೆರೆ: ನಗರದ ಪಿ. ಬಿ.ರಸ್ತೆಯ ನರಹರಿ ಶೇಠ್ ಕಲ್ಯಾಣ ಮಂಟಪದಲ್ಲಿ ಗುಂಪು ಕಟ್ಟಿಕೊಂಡು ಓಡಾಡುತ್ತಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯರಿಗೆ ಡಿಸಿ ತರಾಟೆಗೆ ತೆಗೆದುಕೊಂಡರು ಎಂಬುದು ಸರಿಯಲ್ಲ. ಕೊರೊನಾ ವೈರಸ್ ಸೋಂಕು ದೃಢಪಟ್ಟ ಕಾರಣ ವಿನಂತಿ ಮಾಡಿದ್ದೇನೆಯೇ ಹೊರತು ಉನ್ನತ ಸ್ಥಾನದಲ್ಲಿರುವವರಿಗೆ ತರಾಟೆಗೆ ತೆಗೆದುಕೊಳ್ಳಲು ಹೋಗಿಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಸ್ಪಷ್ಟನೆ ನೀಡಿದ್ದಾರೆ.
ನಗರದ ಬಡಾವಣೆ ಪೊಲೀಸ್ ಠಾಣೆಯ ಎದುರು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಡಿಸಿ ಆಗಿ ಜನಪ್ರತಿನಿಧಿಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ನನ್ನ ಕರ್ತವ್ಯ. ನಿನ್ನೆ ರಾತ್ರಿಯೇ ರೇಣುಕಾಚಾರ್ಯ ಅವರಿಗೆ ಇಲ್ಲಿಗೆ ಬರುವುದು ಬೇಡ ಎಂದು ಹೇಳಿದ್ದೆ. ಆದ್ರೂ ಬಂದಿದ್ದಾರೆ. ನಾವು ಇಲ್ಲಿ ಇದ್ದೇವೆ, ನೋಡಿಕೊಳ್ಳುತ್ತೇನೆ ಎಂದಿದ್ದೆ ಎಂದು ತಿಳಿಸಿದರು.
ಎನಗಿಂತ ಕಿರಿಯರಿಲ್ಲ, ಎನಗಿಂತ ಹಿರಿಯರು ಎಂಬುದನ್ನು ಪಾಲಿಸಿಕೊಂಡು ಬಂದಿದ್ದೇನೆ. ವಿನಂತಿಯೇ ಸ್ವಲ್ಪ ಜೋರು ಆಗಿದೆ ಅಷ್ಟೇ. ಪ್ರೀತಿ, ನೈತಿಕ ಸ್ಥೈರ್ಯ ಜಾಸ್ತಿಯಾಗಿದೆ. ಉನ್ನತ ಸ್ಥಾನದಲ್ಲಿರುವವರಿಗೆ ತರಾಟೆಗೆ ತೆಗೆದುಕೊಳ್ಳುವ ಕೆಲಸ ಮಾಡಲ್ಲ. ಅವರ ಗೌರವದ ಬಗ್ಗೆ ಕಳಕಳಿ ಇದೆ. ಕೊರೊನಾ ಪಾಸಿಟಿವ್ ಕೇಸ್ಗಳು ದಾವಣಗೆರೆಯಲ್ಲಿ ಪತ್ತೆಯಾಗಿರುವ ಕಾರಣ ಅನಗತ್ಯವಾಗಿ ಯಾರೂ ಓಡಾಡಬಾರದು ಎಂದು ಮಹಾಂತೇಶ್ ಬೀಳಗಿ ಮನವಿ ಮಾಡಿದರು.