ದಾವಣಗೆರೆ: ಶಾಲೆಗಳನ್ನು ಯಾವಾಗ ಆರಂಭಿಸಬೇಕೆಂಬ ಬಗ್ಗೆ ನಾವೂ ಗಮನಿಸುತ್ತಿದ್ದೇವೆ. ಈಗಾಗಲೇ ಕಾಲೇಜುಗಳು ಪುನಾರಂಭಗೊಂಡಿವೆ. ಉನ್ನತ ಶಿಕ್ಷಣ ಸಚಿವರು, ಶಾಲೆಯ ಎಸ್‌ಡಿಎಂಸಿ ಅವರೊಂದಿಗೆ ಚರ್ಚಿಸುತ್ತಿದ್ದೇವೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ತಾಲೂಕಿನ ಮಾಳಗೊಂಡನಹಳ್ಳಿ ಗ್ರಾಮದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಾಕಷ್ಟು ಕಾಲಾವಕಾಶ ಇದೆ. ಸೂಕ್ತ ಸಮಯದಲ್ಲಿ ನಿರ್ಧಾರ ಪ್ರಕಟಿಸುತ್ತೇವೆ ಎಂದರು. ವಿದ್ಯಾಗಮ ಯೋಜನೆಯೂ ಸತ್ತಿಲ್ಲ. ಅದನ್ನು ಸಾಯಿಸುವ ಕೆಲಸವನ್ನು ಕೆವರು ಮಾಡುತ್ತಿದ್ದಾರೆ. ತಾತ್ಕಾಲಿಕವಾಗಿ ರದ್ದುಗೊಳಿಸಿದ್ದೇವೆ ಅಷ್ಟೇ. ರೂಪುರೇಷ ಬದಲಾಯಿಸಿ ಮತ್ತೆ ಆರಂಭಿಸುತ್ತೇವೆ. ಮಾಜಿ ಸಿಎಂ ಸಿದ್ದರಾಮಯ್ಯ ಏನೇನೋ ಹೇಳ್ತಾರೆ. ಅವರ ಪಕ್ಷದಲ್ಲಿ ಅವರ ಬಗ್ಗೆ ಏನು ಮಾತಾಡ್ತಾ ಇದಾರೆ ಅಂತಾ ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೋವಿಡ್ ಹಿನ್ನೆಲೆಯಲ್ಲಿ ಗ್ರಾಮ ಒನ್ ಯೋಜನೆ ಚಾಲನೆ ನೀಡಲು ವಿಳಂಬವಾಯ್ತು. ಸಕಾಲದ ಅಡಿ ಗ್ರಾಮ ಒನ್ ಯೋಜನೆಗೆ ಚಾಲನೆ ನೀಡಿದ್ದೇವೆ. ಇಂದು ನಾಳೆ ಅನ್ನಲ್ಲ, ಹೇಳಿದ ಸಮಯಕ್ಕೆ ಸರಿಯಾಗಿ ಸೇವೆ ಎಂಬ ಟ್ಯಾಗ್ ಲೈನ್ ಅಡಿ ಗ್ರಾಮ ಒನ್ ಸೇವೆಯನ್ನು ನೀಡಲಾಗುವುದು. 5 ಸಾವಿರ ಜನಸಂಖ್ಯೆಯ ಗ್ರಾಮಕ್ಕೆ ಈ ಯೋಜನೆ ಸೌಲಭ್ಯ ಸಿಗಲಿದೆ. ಮಧ್ಯವರ್ತಿಗಳ ಮುಕ್ತ ಸೇವೆ ಲಭ್ಯವಾಗಲಿದೆ. ಸೇವಾ ಸಿಂಧು ಕೇವಲ ಪೋರ್ಟಲ್. ಗ್ರಾಮ ಒನ್ ಸೇವಾ ಕೇಂದ್ರವಾಗಿದ್ದು, ಮೈಕ್ರೋ ಫೈನಾನ್ಸ್ ಸೇವೆ ಸಹಾ ಇದರ ಮೂಲಕ ನೀಡುವ ಯೋಜನೆ ಇದೆ ಎಂದು ಮಾಹಿತಿ ನೀಡಿದರು.