ದಾವಣಗೆರೆ: ಲಂಚ, ಸುಳ್ಳು ಇದಕ್ಕೆಲ್ಲಾ ನಮ್ಮಲ್ಲಿ ಆಸ್ಪದವಿಲ್ಲ. ಆರೋಪ ಮಾಡುವಾಗ ದಾಖಲೆ ಸಮೇತ ಮಾಡಲಿ. ಅದನ್ನು ಬಿಟ್ಟು ಯಾರನ್ನೋ ಮೆಚ್ಚಿಸಲು ಕಟ್ಟೆ ಮೇಲೆ ಕಾಫಿ, ಚಹಾ ಕುಡಿಯುತ್ತಾ ಮಾತನಾಡುವುದನ್ನು ಬಿಡಲಿ. ಸುಮ್ಮನೆ ಆರೋಪ ಮಾಡಿದರೆ ನಾನು ಸುಮ್ಮನಿರಲ್ಲ. ಇದನ್ನೇ ಮುಂದುವರೆಸಿದರೆ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಮೇಲೆ ಕೇಸ್ ಹಾಕುವುದಾಗಿ ಮೇಯರ್ ಬಿ.ಜಿ.ಅಜಯ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾನಗರ ಪಾಲಿಕೆಯಲ್ಲಿ ಕೊರೊನಾ ಬಂದ ಬಳಿಕ ಒದ್ದಾಡುತ್ತಿದ್ದೇವೆ. ಯಾವ ಟೆಂಡರ್ ಅನ್ನು ಕರೆದಿಲ್ಲ. ಕಮೀಷನರ್ ಹಾಗೂ ಮೇಯರ್ ಕಮೀಷನ್ ಪಡೆಯುತ್ತಿದ್ದಾರೆ ಎಂಬ ಆರೋಪ ಮಾಡುತ್ತಿರುವ ದಿನೇಶ್ ಶೆಟ್ಟಿಗೆ ಬುದ್ಧಿ ಇದೆಯೋ, ಇಲ್ಲವೋ ಗೊತ್ತಾಗುತ್ತಿಲ್ಲ. ಪಾಲಿಕೆಯ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಅನುಭವಿಸಿರುವ ಶೆಟ್ಟಿಗೆ ಕೇವಲ 874 ಮತಗಳು ಸಿಕ್ಕಿದ್ದು, ನನಗೆ 2,595 ಸಿಕ್ಕಿವೆ. 1,521 ಮತಗಳಿಂದ ಹೀನಾಯ ಸೋಲು ಅನುಭವಿಸಲು ಅವರ ಮಾತುಗಳೇ ಕಾರಣ.
ಒಳ್ಳೆಯ ಕೆಲಸಗಾರ. ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಇದರ ಬಗ್ಗೆ ನಾನು ಮಾತನಾಡಲ್ಲ. ಬೇರೊಬ್ಬರ ಬಗ್ಗೆ ಹಗುರವಾಗಿ ಹೇಳಿಕೆ ಕೊಡುವುದನ್ನು ಬಿಡಬೇಕು. ತನ್ನ ಸ್ಥಾನ ಏನು ಎಂಬುದನ್ನು ಅರಿತು ಮಾತನಾಡಲಿ. ಸಂಸದ ಸಿದ್ದೇಶ್ವರ್ ನಾಲ್ಕು ಬಾರಿ ಸಂಸದರಾಗಿ ಆಯ್ಕೆ ಆಗಿದ್ದಾರೆ. ಭ್ರಷ್ಟಾಚಾರ ಹೆಚ್ಚಾಗಲು ಅವರೇ ಕಾರಣ ಎಂಬ ಆರೋಪ ಮಾಡಿರುವ ದಿನೇಶ್ ಶೆಟ್ಟಿ ಅಂತವರಿಂದಲೇ ಕಾಂಗ್ರೆಸ್ ಹಿನ್ನೆಡೆ ಅನುಭವಿಸುತ್ತಿರುವುದು. ಇಂತವರನ್ನು ಪಕ್ಷದಿಂದ ಹೊರಹಾಕಿದರೆ ಒಳ್ಳೆಯದಾಗುತ್ತದೆ. ಶಾಮನೂರು ಶಿವಶಂಕರಪ್ಪ, ಎಸ್.ಎಸ್.ಮಲ್ಲಿಕಾರ್ಜುನ್ ಅವರೇ ಏನೂ ಆರೋಪ ಮಾಡಿಲ್ಲ. ಅವರಿಗೆ ಸಿದ್ದೇಶಣ್ಣ ಏನು ಎಂಬುದು ಗೊತ್ತಿದೆ. ದೊಡ್ಡವರ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾಡಬೇಕು ಎಂದು ಕಿಡಿಕಾರಿದರು.