ದಾವಣಗೆರೆ: "ನಾನು ಯಾವುದೇ ಆಮಿಷಗಳಿಗೆ ಒಳಗಾಗಿ ಬಿಜೆಪಿಗೆ ಹೋಗಿಲ್ಲ. ಸ್ವಾಭಿಮಾನಕ್ಕೋಸ್ಕರ ಪಕ್ಷ ಬಿಟ್ಟಿದ್ದೆವು. 40 ಪರ್ಸೆಂಟ್ ಕಮಿಷನ್ ವಿಚಾರದಲ್ಲಿ ಸಿದ್ದರಾಮಯ್ಯನವರು ಬರೀ ಸುಳ್ಳು ಹೇಳಿಕೊಂಡು ರಾಜಕಾರಣ ಮಾಡಲು ಹೊರಟಿದ್ದಾರೆ" ಎಂದು ಸಚಿವ ಭೈರತಿ ಬಸವರಾಜ್ ಅವರು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ದಾವಣಗೆರೆಯಲ್ಲಿ ಮಾತನಾಡಿದ ಅವರು, "ಕಮಿಷನ್ ವಿಚಾರದಲ್ಲಿ ನನ್ನ ಹಾಗೂ ಆರೋಗ್ಯ ಸಚಿವ ಸುಧಾಕರ್ ವಿರುದ್ಧ ಅನಗತ್ಯ ಆರೋಪ ಮಾಡಲಾಗುತ್ತಿದೆ. ನಾನು ಕಮಿಷನ್ ತೆಗೆದುಕೊಂಡಿರುವುದನ್ನು ಸಾಬೀತು ಮಾಡಿದರೆ ರಾಜಕೀಯದಿಂದ ನಿವೃತ್ತಿ ತೆಗೆದುಕೊಳ್ಳುತ್ತೇನೆ. ಬೇಕಾದರೆ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡುತ್ತೇನೆ. ಅವರೂ ಪ್ರಮಾಣ ಮಾಡಲಿ. ಇದಕ್ಕಾಗಿ ಅವರು ಎಲ್ಲಿಗೆ ಕರೆಯುತ್ತಾರೋ ಅಲ್ಲಿಗೆ ಹೋಗಲು ರೆಡಿ" ಎಂದು ಸವಾಲೆಸೆದರು.
17 ಶಾಸಕರನ್ನು ಮತ್ತೆ ಕಾಂಗ್ರೆಸ್ಗೆ ಕರೆತರುತ್ತೇವೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, "ನಾವು ಯಾರೂ ಹೋಗುವುದಿಲ್ಲ. ಯಾರೋ ಒಂದಿಬ್ಬರು ಹೋಗುವುದಾಗಿ ಹೇಳಿದ್ದಾರೆ. ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ನಾನು ಪಕ್ಷ ಬಿಟ್ಟು ಹೋಗುವುದಿಲ್ಲ. ನನಗೆ ಅಧಿಕಾರ ಮುಖ್ಯವಲ್ಲ. ಎಲ್ಲಿ ಗೌರವ ಇದೆಯೋ ಅಲ್ಲಿ ನಾವಿರುತ್ತೇವೆ" ಎಂದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವ ಕುರಿತು ಪ್ರತಿಕ್ರಿಯಿಸಿ, "ಅವರು ಎಲ್ಲಿ ಬೇಕಾದರೂ ನಿಂತುಕೊಳ್ಳಲಿ. ಅವರ ಪಕ್ಷ, ಅವರ ತೀರ್ಮಾನ. ನಾನು ಅದರ ಬಗ್ಗೆ ಪ್ರತಿಕ್ರಿಯೆ ನೀಡಲ್ಲ" ಎಂದು ತಿಳಿಸಿದರು.
"ನಲವತ್ತು ಪರ್ಸೆಂಟ್ ಅಂತ ಹೇಳಿದವರೆಲ್ಲಾ ಬೇಲ್ ಮೇಲಿದ್ದಾರೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಯ್ಯನವರಿಗೆ ಟಾಂಗ್ ಕೊಟ್ಟರು. ಬೇಲ್ ಮೇಲಿದ್ದಾರಲ್ಲ, ಅವರ ಬಳಿ 40% ಕಮಿಷನ್ಗೆ ಸಂಬಂಧಿಸಿದಂತೆ ದಾಖಲೆಗಳಿದ್ದರೆ ಕೋರ್ಟ್ಗೆ ಸಲ್ಲಿಸಲಿ. ಸುಖಾಸುಮ್ಮನೆ ನಮ್ಮ ಸರ್ಕಾರದ ವಿರುದ್ಧ 40% ಕಮಿಷನ್ ಬಗ್ಗೆ ಆರೋಪ ಮಾಡಲಾಗುತ್ತಿದೆ" ಎಂದರು. ಇದೇ ವೇಳೆ, "ನಮ್ಮ 70 ಶಾಸಕರು ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಬೇಡ ಎಂದು ಸಹಿ ಹಾಕಿರುವುದು ನನಗೆ ಗೊತ್ತಿಲ್ಲ. ಸಾಮೂಹಿಕ ನಾಯಕತ್ವ, ರಾಜ್ಯದ ಹಿರಿಯ ನಾಯಕರ ನೇತೃತ್ವದಲ್ಲಿ ಚುನಾವಣೆ ಮಾಡುತ್ತೇವೆ" ಎಂದು ಸಚಿವ ಭೈರತಿ ಬಸವರಾಜ್ ಹೇಳಿದರು.
ಇದನ್ನೂ ಓದಿ: ಕರಾವಳಿ, ಮಲೆನಾಡಿನಲ್ಲಿ ಕೋಮು ಸೌಹಾರ್ದತೆಯ ಮರುಸ್ಥಾಪನೆಗೆ ಪ್ರತ್ಯೇಕ ಪ್ರಜಾಧ್ವನಿ ಯಾತ್ರೆ: ರಣದೀಪ್ ಸಿಂಗ್ ಸುರ್ಜೇವಾಲ