ದಾವಣಗೆರೆ : ಕರ್ನಾಟಕದಲ್ಲಿ ಈ ಹಿಂದೆ 90 ಮಂದಿ ಲಿಂಗಾಯತ ಶಾಸಕರಿದ್ದರು. ಈ ಹಿನ್ನೆಲೆಯಲ್ಲಿ ನಾನು 60-70 ಜನರಿಗೆ ಟಿಕೆಟ್ ಕೊಡಿ ಎಂದು ಕೇಳಿದ್ದೇನೆ. ಕೊಟ್ಟರೆ, ಅವರೆಲ್ಲ ಗೆದ್ದರೆ ಮುಂದಿನ ಮುಖ್ಯಮಂತ್ರಿ ಲಿಂಗಾಯತ ವ್ಯಕ್ತಿ ಆಗುತ್ತಾರೆ ಎಂದು ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಹಾಗು ಕಾಂಗ್ರೆಸ್‌ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿಂದು ಮತ ಪ್ರಚಾರದ ವೇಳೆ ಮಾತನಾಡಿದ ಅವರು, ನಾನು ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ. ಸಮುದಾಯದ ಹಿತ ಕಾಪಾಡಬೇಕಾದದ್ದು ನನ್ನ ಕರ್ತವ್ಯ. ಅದಕ್ಕಾಗಿ 70 ಮಂದಿ ಲಿಂಗಾಯತರಿಗೆ ಟಿಕೆಟ್ ಕೊಡಿ ಎಂದು ಹೈಕಮಾಂಡ್ಗೆ ಕೇಳಿದ್ದೇನೆ ಎಂದರು.
ಸಿಎಂ ಯಾರು ಎಂದು ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ. ಚುನಾವಣೆ ಗೆದ್ದು ವಿಧಾನಸಭೆಗೆ ಆಗಮಿಸುವ ಶಾಸಕರು ಸಿಎಂ ಯಾರಾಗ್ಬೇಕೆಂದು ಆಯ್ಕೆ ಮಾಡ್ತಾರೆ. ಸದ್ಯ ಅವರಿಗೆ ಬೇಕಾದವರು ಸಿಎಂ ಎಂದು ಹೇಳುತ್ತಿದ್ದಾರೆ, ಹೇಳಲು. ರಾಜ್ಯದಲ್ಲಿ ಕಾಂಗ್ರೆಸ್ಗೆ 150 ಸ್ಥಾನ ಬರಲಿದೆ. ಉತ್ತರ ಕ್ಷೇತ್ರಕ್ಕೆ ಸಿಎಂ ಬೊಮ್ಮಾಯಿ ಅಲ್ಲ, ಯಾರೇ ಬರಲಿ ಏನ್ ಹೆದರಿಕೆಯೇ?. ಉತ್ತರಕ್ಕೆ ಅಲ್ಲ ದಕ್ಷಿಣಕ್ಕೂ ಬರಲಿ. ಇಲ್ಲಿ ಬಂದವರು ಸೋಲುವುದು ಖಚಿತ ಎಂದು ಹೇಳಿದರು.
ರಾಜ್ಯದಲ್ಲಿ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ದಾವಣಗೆರೆಯಲ್ಲಿ ಬಿರುಸಿನ ಚುನಾವಣಾ ಪ್ರಚಾರ ನಡೆಯುತ್ತಿದೆ. ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆಯಾಗುವ ಮೊದಲೇ ದಾವಣಗೆರೆಯಲ್ಲಿ ಕಾಂಗ್ರೆಸ್ ನಾಯಕ ಎಸ್.ಎಸ್.ಮಲ್ಲಿಕಾರ್ಜುನ್ ಮತ್ತು ಶಾಮನೂರು ಶಿವಶಂಕರಪ್ಪ ನಿನ್ನೆಯಿಂದ ಜಿಲ್ಲೆಯಲ್ಲಿ ಅಧಿಕೃತವಾಗಿ ಚುನಾವಣಾ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.
ಚುನಾವಣಾ ಪ್ರಚಾರಕ್ಕೂ ಮೊದಲು ಸಂಪ್ರದಾಯದಂತೆ ಶಾಮನೂರಿನ ಆಂಜನೇಯ ಸ್ವಾಮಿ ಹಾಗೂ ಆನಕೊಂಡದ ಬಸವೇಶ್ವರ ಮತ್ತು ಈಶ್ವರ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಮೂಲಕ ಚುನಾವಣಾ ಅಖಾಡಕ್ಕೆ ತಂದೆ-ಮಗ ಇಬ್ಬರೂ ಇಳಿದಿದ್ದಾರೆ.
ಇದನ್ನೂ ಓದಿ : ಕಾಂಗ್ರೆಸ್ ಎರಡನೇ ಪಟ್ಟಿ ಬಿಡುಗಡೆಗೆ ಕ್ಷಣಗಣನೆ.. ಟಿಕೆಟ್ ಆಕಾಂಕ್ಷಿಗಳಲ್ಲಿ ಹೆಚ್ಚಿದ ಕುತೂಹಲ
2018ರಲ್ಲಿ ಸೋತು ತಮ್ಮ ಕ್ಷೇತ್ರದಿಂದ ದೂರ ಉಳಿದಿದ್ದ ಮಲ್ಲಿಕಾರ್ಜುನ್ ಟಿಕೆಟ್ ಘೋಷಣೆ ಆಗುತ್ತಿದ್ದಂತೆ ತಮ್ಮ ಕಾರ್ಯಕರ್ತರೊಂದಿಗೆ ಉತ್ತರ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನರ ಆಶೀರ್ವಾದ ಮತ್ತು ಬೆಂಬಲ ನನ್ನ ಮತ್ತು ಕಾಂಗ್ರೆಸ್ ಪಕ್ಷದ ಮೇಲೆ ಇದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ : ಬೆಣ್ಣೆನಗರಿಯಲ್ಲಿ ರಂಗೇರಿದ ಚುನಾವಣೆ, ಪ್ರಚಾರಕ್ಕಿಳಿದ ಶಾಮನೂರು ಶಿವಶಂಕರಪ್ಪ, ಎಸ್ಎಸ್ ಮಲ್ಲಿಕಾರ್ಜುನ್