ದಾವಣಗೆರೆ: ಪ್ರಿಯಕರನೊಂದಿಗೆ ಸೇರಿ ಪತ್ನಿಯೇ ಪತಿಯನ್ನು ಕೊಲೆ ಮಾಡಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಘಟನೆ ನಡೆದ ಐದು ದಿನಗಳ ಬಳಿಕ ಕೊಲೆಯ ಸತ್ಯಾಂಶ ಬೆಳಕಿಗೆ ಬಂದಿದೆ. ನಿಂಗರಾಜ್ (34) ಕೊಲೆಯಾದ ಪತಿ. ಕಾವ್ಯ ಹಾಗೂ ಅವಳ ಪ್ರಿಯಕರ ಬೀರೇಶ್ ಕೊಲೆ ಮಾಡಿದ ಆರೋಪಿಗಳು.
ಕೊಲೆ ಮುಚ್ಚಿ ಹಾಕಲು ಯತ್ನ: ಮನೆಯ ಮೇಲಿಂದ ಬಿದ್ದು ಪತಿ ಸಾವನ್ನಪ್ಪಿದ್ದಾನೆ ಎಂದು ಪತ್ನಿ ಕಥೆ ಕಟ್ಟಿ ಕೊಲೆ ಮುಚ್ಚಿ ಹಾಕಲು ಯತ್ನಿಸಿದ್ದಳು. ಪ್ರಿಯಕರನ ಜತೆ ಸೇರಿ ತಲೆಗೆ ಕಬ್ಬಿಣದ ಆಯುಧದಿಂದ ಹೊಡೆದು ಹತ್ಯೆಗೈಯಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಿಂದ ಹೊರಡಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
ಅನೈತಿಕ ಸಂಬಂಧಕ್ಕೆ ಅಡ್ಡಿ ಹಿನ್ನೆಲೆ ಕೊಲೆ: ಜೂ.9ರಂದು ದಾವಣಗೆರೆ ತಾಲೂಕಿನ ಹಳೆ ಬಿಸಲೇರಿ ಗ್ರಾಮದ ದುರ್ಗಾಂಬಿಕಾ ಕ್ಯಾಂಪ್ನಲ್ಲಿ ಈ ಘಟನೆ ನಡೆದಿತ್ತು. ಕೊಲೆ ಶಂಕೆ ಎಂದು ನಿಂಗರಾಜ ತಾಯಿ ಶಿವಲಿಂಗಮ್ಮ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಈ ಹಿಂದೆ ಮೃತ ಪತಿ ನಿಂಗರಾಜ್ನನ್ನು ಬಿಟ್ಟು ಪ್ರಿಯಕರ ಬೀರೇಶ್ ಜೊತೆ ಕಾವ್ಯ ಓಡಿ ಹೋಗಿದ್ದಳು. ಕಾವ್ಯ-ನಿಂಗರಾಜ್ ದಂಪತಿಗೆ ಪುಟ್ಟ ಮಗುವಿದ್ದ ಕಾರಣ ಹಿರಿಯರು ಗ್ರಾಮದಲ್ಲಿ ರಾಜೀ ಪಂಚಾಯಿತಿ ಮಾಡುವ ಮೂಲಕ ಪತಿ ಜೊತೆ ಮತ್ತೆ ಸೇರುವಂತೆ ಮಾಡಿದ್ದರು. ಬಳಿಕ ಪ್ರಿಯಕರ ಬೀರೇಶ್ನನ್ನು ಬಿಟ್ಟು ಕಾವ್ಯ ಮತ್ತೆ ನಿಂಗರಾಜ್ನೊಂದಿಗೆ ಸಂಸಾರ ಮಾಡುತ್ತಿದ್ದಳು.
ಆದರೆ ಈ ನಡುವೆ ಅನೈತಿಕ ಸಂಬಂಧದ ವಿಚಾರವಾಗಿ ಇಬ್ಬರಿಗೂ ಹಲವು ಬಾರಿ ಜಗಳವಾಗುತ್ತಿತ್ತು ಎನ್ನಲಾಗಿದೆ. ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿ ನಿಂಗರಾಜ್ನನ್ನು ಪ್ರಿಯಕರ ಬೀರೇಶ್ ಜತೆ ಸೇರಿ ಕಬ್ಬಿಣದ ರಾಡ್ನಿಂದ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿದ್ದರು. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಹದಡಿ ಠಾಣೆಯ ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಪ್ರಿಯಕರನೊಂದಿಗೆ ಸೇರಿ ಗಂಡನ ಹತ್ಯೆ: ಆರು ತಿಂಗಳ ಬಳಿಕ ತಾಯಿಗೆ ಉರುಳಾದ ಮಕ್ಕಳ ಹೇಳಿಕೆ
ಪ್ರಕರಣದ ಹಿನ್ನೆಲೆ: ಅಕ್ರಮ ಸಂಬಂಧ ಹಿನ್ನೆಲೆ ಪತಿಯನ್ನು ಕೊಲೆಗೈಯಲಾಗಿದೆ ಎಂದು ಮೃತ ನಿಂಗರಾಜ್ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದರು. ಶುಕ್ರವಾರ(ಜೂ.9) ರಾತ್ರಿ ಲಿಂಗರಾಜ ಮನೆಯಲ್ಲಿ ದೇವರ ಕಾರ್ಯವಿತ್ತು. ದೇವರ ಕಾರ್ಯದ ವೇಳೆ ಅನುಮಾನಾಸ್ಪದವಾಗಿ ನಿಂಗರಾಜ್ ಸಾವನ್ನಪ್ಪಿದ್ದಾನೆ. ಈ ಹಠಾತ್ ಸಾವು ಸಂಶಯಕ್ಕೆ ಕಾರಣವಾಗಿತ್ತು. ಮನೆ ಸ್ವಚ್ಛಗೊಳಿಸುವಾಗ ಬಿದ್ದು ಮೃತಪಟ್ಟಿರುವುದು ಪತ್ನಿ ಹೇಳಿದ್ದಳು. ನಿಂಗರಾಜ್ ಸಾವಿಗೆ ನಿಖರವಾದ ಕಾರಣ ತಿಳಿದುಬಂದಿರಲಿಲ್ಲ. ಆರೋಪಿಯನ್ನು ಬಂಧಿಸುವ ತನಕ ಶವಸಂಸ್ಕಾರ ಮಾಡುವುದಿಲ್ಲ ಎಂದು ಮೃತನ ಸಂಬಂಧಿಕರು ಪಟ್ಟು ಹಿಡಿದಿದ್ದರು.
ಅನೈತಿಕ ಸಂಬಂಧದ ವಿಚಾರವಾಗಿ ಇಬ್ಬರಿಗೂ ಹಲವು ಬಾರಿ ಜಗಳವಾಗಿದೆ. ಆದರೆ ಪತ್ನಿ ಮಾತ್ರ ತನ್ನ ಪ್ರಿಯಕರನ ಜೊತೆ ಸಂಬಂಧ ಮುಂದುವರೆಸಿದ್ದಳು. ಇದಕ್ಕೆ ಪತಿ ನಿಂಗರಾಜ್ ಅಡ್ಡಿಯಾಗಿದ್ದು, ಈತನನ್ನು ಮುಗಿಸಲು ಪತ್ನಿ ಸಂಚು ರೂಪಿಸಿ ಹತ್ಯೆ ಮಾಡಿದ್ದಾಳೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಬೇಕು ಎಂದು ಕುಟುಂಬಸ್ಥರು ಒತ್ತಾಯಿಸಿದ್ದರು.
ಇದನ್ನೂ ಓದಿ: Davanagere crime: ಅನುಮಾನಾಸ್ಪದವಾಗಿ ವ್ಯಕ್ತಿ ಸಾವು.. ಪತ್ನಿ ಮೇಲೆ ಗುಮಾನಿ.. ಪ್ರಿಯಕರನೊಂದಿಗೆ ಸೇರಿ ಗಂಡನ ಕೊಂದಳಾ ಹೆಂಡತಿ?