ದಾವಣಗೆರೆ: ಅನೈತಿಕ ಸಂಬಂಧ ಹೊಂದಿದ್ದ ಪತಿಯನ್ನು ಸುಪಾರಿ ನೀಡಿ ಕೊಲ್ಲಿಸಿದ್ದ ಪ್ರಕರಣ ಸಂಬಂಧ ಆತನ ಪತ್ನಿ ಸೇರಿದಂತೆ ನಾಲ್ವರು ಆರೋಪಿಗಳನ್ನು ಜಗಳೂರು ಪೊಲೀಸರು ಬಂಧಿಸಿದ್ದಾರೆ.
ಹತ್ಯೆಗೀಡಾದ ಬಸವರಾಜ್ನ ಪತ್ನಿ ಭಾಗ್ಯಮ್ಮ, ಜಗಳೂರು ತಾಲೂಕಿನ ಗುಡ್ಡದ ನಿಂಗನಹಳ್ಳಿ ಗ್ರಾಮದ ಅಂಜಿನಪ್ಪ, ಚೌಡಪ್ಪ ಹಾಗೂ ಆಟೋ ಚಾಲಕ ಮಾರುತಿ ಎಂಬುವವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಕೊಲೆಗೆ ಬಳಸಿದ್ದ ಮಚ್ಚು, ಆಟೋವನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ಹನುಮಂತರಾಯ ತಿಳಿಸಿದ್ದಾರೆ.
ಕಳೆದ ಮಂಗಳವಾರ ರಾತ್ರಿ ಎಗ್ ರೈಸ್ ವ್ಯಾಪಾರಿ ಬಸವರಾಜ್ ಎಂಬುವವರ ಮೃತದೇಹ ಕತ್ತು ಕೊಯ್ದು ಕೊಲೆ ಮಾಡಿದ ಸ್ಥಿತಿಯಲ್ಲಿ ಜಗಳೂರು ತಾಲೂಕಿನ ಬಿದರಕೆರೆ ರಸ್ತೆಯಲ್ಲಿ ಸಿಕ್ಕಿತ್ತು. ಈ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಗಂಡನ ಹತ್ಯೆಗೆ 1 ಲಕ್ಷ ರೂ. ಸುಪಾರಿ ನೀಡಿದ್ದ ಪತ್ನಿ...!
ಬಸವರಾಜ್ಗೆ ಬೇರೊಬ್ಬ ಮಹಿಳೆಯ ಜೊತೆ ಅನೈತಿಕ ಸಂಬಂಧ ಇತ್ತು. ಈ ವಿಚಾರ ಭಾಗ್ಯಮ್ಮರಿಗೆ ತಿಳಿದಿತ್ತು. ಈ ವಿಷಯವಾಗಿ ಇಬ್ಬರ ನಡುವೆ ಆಗಾಗ್ಗೆ ಗಲಾಟೆ ನಡೆಯುತಿತ್ತು. ಮಹಿಳೆ ಜೊತೆಗಿನ ಸಂಬಂಧ ಬಿಡುವಂತೆ ಭಾಗ್ಯಮ್ಮ ಪೀಡಿಸುತ್ತಿದ್ದರೂ ಬಸವರಾಜ್ ಮಾತ್ರ ಬಿಟ್ಟಿರಲಿಲ್ಲ.
ಇದರಿಂದ ಬೇಸತ್ತಿದ್ದ ಭಾಗ್ಯಮ್ಮ ಪತಿ ಹತ್ಯೆ ಮಾಡಲು ಸ್ಕೆಚ್ ಹಾಕಿದ್ದಾಳೆ. ಅಂಜಿನಪ್ಪ, ಚಾಲಕ ಮಾರುತಿ ಹಾಗೂ ಚೌಡಪ್ಪರಿಗೆ ಪತಿ ಹತ್ಯೆ ಮಾಡಿದರೆ ಒಂದು ಲಕ್ಷ ರೂಪಾಯಿ ಕೊಡುವುದಾಗಿ ಹೇಳಿ ಒಪ್ಪಿಸಿದ್ದಳು. ಈ ಯೋಜನೆಯಂತೆ ಮಂಗಳವಾರ ವ್ಯಾಪಾರ ಮುಗಿಸಿ ಬಸವರಾಜ್ ಮನೆಗೆ ಹೋಗಿದ್ದರು. ಆಗ ಪತಿಗೆ ತಿಳಿಯದಂತೆ ರಾಗಿ ಮುದ್ದೆಯಲ್ಲಿ ಹತ್ತು ನಿದ್ರೆ ಮಾತ್ರೆ ಹಾಕಿದ್ದಾಳೆ. ಆಗ ಬಸವರಾಜ್ ಮಲಗಿದ್ದಾರೆ. ಬಳಿಕ ಬಿದರಕೆರೆ ರಸ್ತೆಗೆ ಕರೆತಂದು ಮಚ್ಚಿನಿಂದ ಬಸವರಾಜ್ ಕುತ್ತಿಗೆಯನ್ನು ಕೊಚ್ಚಿ ಹತ್ಯೆ ಮಾಡಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಎಎಸ್ ಪಿ ಎಂ. ರಾಜೀವ್ ಮಾರ್ಗದರ್ಶನದಲ್ಲಿ ಗ್ರಾಮಾಂತರ ಡಿವೈಎಸ್ಪಿ ನರಸಿಂಹ ವಿ. ತಾಮ್ರಧ್ವಜ ನೇತೃತ್ವದಲ್ಲಿ ಸಿಪಿಐ ದುರುಗಪ್ಪ ತನಿಖೆ ನಡೆಸಿ ಆರೋಪಿಗಳನ್ನು ಆದಷ್ಟು ಶೀಘ್ರದಲ್ಲೇ ಬಂಧಿಸಿದ್ದು, ಎಸ್ಪಿ ಹನುಮಂತರಾಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.