ದಾವಣಗೆರೆ/ಹರಿಹರ: ನಗರದಲ್ಲಿರುವ ವಲಸಿಗರಿಗೆ ಮತ್ತು ಒಂದೇ ಮನೆಯಲ್ಲಿ ಹೆಚ್ಚುವರಿಯಾಗಿ ಇರುವ ನಿವಾಸಿಗಳಿಗೆ ನಗರದ ಕಲ್ಯಾಣ ಮಂಟಪಗಳಲ್ಲಿ ತಾತ್ಕಾಲಿಕವಾಗಿ ತಾಲೂಕು ಆಡಳಿತದಿಂದ ವ್ಯವಸ್ಥೆ ಮಾಡಲಾಗುವುದು ಎಂದು ತಹಸೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಹೇಳಿದ್ದಾರೆ.
ನಗರದ ಜೆ.ಸಿ.ಬಡಾವಣೆ 5ನೇ ಮೈನ್, 4ನೇ ಕ್ರಾಸ್ನಲ್ಲಿರುವ ರಾಜಶೇಖರಪ್ಪನವರ ಮನೆಯ ಮೊದಲನೇ ಮಹಡಿಯಲ್ಲಿ ಬಾಡಿಗೆ ಇರುವ ರಾಜಸ್ಥಾನದ ವ್ಯಕ್ತಿಯ ಮನೆಗೆ ಭಾನುವಾರ ರಾತ್ರಿ ಕೆಲ ವಲಸಿಗರು ಬಂದಿರುವ ಮಾಹಿತಿ ಹಿನ್ನೆಲೆಯಲ್ಲಿ, ಆ ಭಾಗದ ನಗರಸಭೆ ಸದಸ್ಯರಾದ ಶ್ರೀಮತಿ ಉಷಾ ಕಿರಣ್ ಮನವಿಯ ಮೇರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ತಹಸೀಲ್ದಾರ್ ಮಾತನಾಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಮೋಹನ್ ಮತ್ತು ಅವರ ಸಿಬ್ಬಂದಿಯೊಂದಿಗೆ ಭೇಟಿ ಮಾಡಿದ ಅವರು,ಮನೆಯನ್ನುಸಂಪೂರ್ಣವಾಗಿ ವೀಕ್ಷಿಸಿ, ಬಂದಿದ್ದ 16 ಜನರನ್ನು ಆರೋಗ್ಯ ತಪಾಸಣೆ ಮಾಡುವಂತೆ ಆದೇಶಿಸಿದರು.
ತಕ್ಷಣ ಆರೋಗ್ಯ ಇಲಾಖೆಯ ಸಿಬ್ಬಂದಿ ಎಲ್ಲರನ್ನು ಥರ್ಮಲ್ ಸ್ಕ್ರೀನಿಂಗ್ ಟೆಸ್ಟ್ ನಡೆಸಿ, ಅವರಿಗೆ ಯಾವುದೇ ರೀತಿಯ ಉಷ್ಣಾಂಶ ಇಲ್ಲ ಎನ್ನುವ ಬಗ್ಗೆ ಮಾಹಿತಿ ನೀಡಿದ್ರು. ಅವರು ಚೆನ್ನೈನಿಂದ ತಂದಿದ್ದ ವೈದ್ಯಕೀಯ ಪ್ರಮಾಣ ಪತ್ರವನ್ನು ಸಹ ಪರೀಕ್ಷಿಸಿದರು. ಬಂದಂತಹ ವಲಸಿಗರು, ಕೋಡಿಯಾಲ ಹೊಸಪೇಟೆಯ ಬಳಿ ನಮ್ಮ ಸಂಬಂಧಿಕರೇ ಆದ ಡಾಬಾ ಇರುವುದಾಗಿ ಅಲ್ಲಿಗೆ ನಮ್ಮನ್ನು ಕಳುಹಿಸಿದರೆ ನಾವು ಅಲ್ಲಿ ವಸತಿ ಮಾಡುವುದಾಗಿ ವಿನಂತಿಸಿದರು. ಆದರೆ, ಇದಕ್ಕೆ ಒಪ್ಪದ ತಹಶೀಲ್ದಾರ್, ಇಲ್ಲಿಯೇ ಕಲ್ಯಾಣ ಮಂಟಪದಲ್ಲಿ ನಿಮ್ಮೆಲ್ಲರಿಗೂ ವ್ಯವಸ್ಥೆ ಮಾಡಲಾಗುವುದು ನೀವು ಅಲ್ಲಿಯೇ ಉಳಿದುಕೊಳ್ಳಬೇಕೆಂದು ತಿಳಿಸಿದರು.