ದಾವಣಗೆರೆ: 2009ರಲ್ಲಿ ಇದಕ್ಕಿಂತ ದೊಡ್ಡ ಪ್ರವಾಹ ಆಗಿತ್ತು. ಆಗ 17 ಸಾವಿರ ಕೋಟಿ ರೂಪಾಯಿ ಕೇಳಿದ್ದೆವು. ಅಂದಿನ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಮಧ್ಯಂತರ 500 ಕೋಟಿ ರೂ. ಮಾತ್ರ ನೀಡಿದ್ದರು. ಇದು ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಗೊತ್ತಿಲ್ಲವೇ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಟಾಂಗ್ ನೀಡಿದ್ದಾರೆ.
ದಾವಣಗೆರೆ ನಗರದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಪರಿಹಾರ ಕಡಿಮೆ ಆಯಿತು ಎಂದು ಹೇಳುತ್ತಿದ್ದಾರೆ. ಆದರೆ ಅಂದು ಪ್ರವಾಹ ಆದಾಗ ಇವರು ಕೊಟ್ಟಿದ್ದು ಎಷ್ಟು ಎಂದು ಅರಿಯಲಿ. ಈಗ 12 ಸಾವಿರ ಕೋಟಿ ಬಂದಿದೆ. ಮತ್ತೆ ಪರಿಹಾರ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಔರಾದ್ಕರ್ ವರದಿ ಬಗ್ಗೆ ಚರ್ಚೆ ನಡೆಯುತ್ತಿದೆ. ಹಣಕಾಸಿನ ತಂಡದೊಂದಿಗೆ ಚರ್ಚಿಸಿ ನಂತರ ತೀರ್ಮಾನ ಕೈಗೊಳ್ಳಲಾಗುವುದು. ಯಾವುದೇ ತೊಂದರೆ ಇಲ್ಲ. ಪೊಲೀಸರಿಗೆ ನಾಲ್ಕನೇ ವಾರದ ರಜೆ ಬಗ್ಗೆಯೂ ಕೂಡ ಚರ್ಚೆ ನಡೆಯುತ್ತಿದೆ ಎಂದರು.
ಇನ್ನು ಖಜಾನೆ ಖಾಲಿಯಾಗಿದೆ ಎನ್ನುವ ಮಾತೇ ಇಲ್ಲ. ಸಾರಿಗೆ ನಿಗಮದ್ದು ಹಲವಾರು ವರ್ಷಗಳಿಂದ ಸಮಸ್ಯೆ ಇದೆ. ಆ ಕಾರಣಕ್ಕೆ ಪೆಡಿಂಗ್ ಇದೆ. ಕುಮಾರಸ್ವಾಮಿ 14 ತಿಂಗಳು ಯಾವ ರೀತಿ ಅಧಿಕಾರ ನಡೆಸಿದರು ಎಂಬುದು ಎಲ್ಲರಿಗೆ ಗೊತ್ತಿದೆ ಎಂದು ಲೇವಡಿ ಮಾಡಿದರು.