ದಾವಣಗೆರೆ: ಅದು ಐತಿಹಾಸಿಕ ಕೆರೆ. ಒಂದು ಕಾಲದಲ್ಲಿ ಇಡೀ ಗ್ರಾಮದ ಸುತ್ತಮುತ್ತಲಿನ ಜಮೀನುಗಳಿಗೆ ನೀರುಣಿಸುವ ಏಕೈಕಾ ಜೀವಜಲದ ನೆಲೆ. ಆದ್ರೆ ಈ ಕೆರೆಯಲ್ಲಿ ಇತ್ತೀಚಿಗೆ ಹನಿ ನೀರಿಲ್ಲದೆ ಇಡೀ ಕೆರೆ ಬಣಗುಡುತ್ತಿತ್ತು. ಇದೀಗ ನಿರಂತರವಾಗಿ ಬೀಳುತ್ತಿರುವ ಮಳೆಯಿಂದಾಗಿ ದಾವಣಗೆರೆ ತಾಲೂಕಿನ ಹೆಬ್ಬಾಳ ಐತಿಹಾಸಿಕ ಕೆರೆ 50 ವರ್ಷಗಳ ಬಳಿಕ ತುಂಬಿ ಕೋಡಿಬಿದ್ದಿದ್ದು, ಗ್ರಾಮಸ್ಥರು ಕುಣಿದು ಕುಪ್ಪಳಿಸಿ ಸಂತಸ ವ್ಯಕ್ತಪಡಿಸಿದರು.
ಹೆಬ್ಬಾಳು ಗ್ರಾಮದಲ್ಲಿ ಸಂತಸ ಮನೆ ಮಾಡಿದೆ. ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಗ್ರಾಮದಲ್ಲಿರುವ ಕೆರೆಯಲ್ಲಿ ಹನಿ ನೀರಿಲ್ಲದೆ ಇಡೀ ಕೆರೆ ಬಣಗುಡುತ್ತಿತ್ತು. ಮೆಕ್ಕೆಜೋಳ, ಅಡಿಕೆ ನೆಲಕಚ್ಚುವ ಹಂತ ತಲುಪಿದ್ದವು. ಆದರೆ, ನಿರಂತರವಾಗಿ ಮಳೆ ಬೀಳುತ್ತಿರುವ ಪರಿಣಾಮ ಈ ಗ್ರಾಮದ ಕೆರೆಗೆ ಜೀವಕಳೆ ಬಂದಿದೆ. ಇಡೀ ಕೆರೆ ಜಲರಾಶಿಯಿಂದ ತುಂಬಿ ಕೋಡಿ ಬಿದ್ದಿದ್ದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಕೆರೆ ತುಂಬಿದ್ದರಿಂದ ರೈತರು ಹಾಗು ಗ್ರಾಮಸ್ಥರು ಕುಣಿದು ಕುಪ್ಪಳಿಸುತ್ತಿದ್ದು, ಅವರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ಇನ್ನು, ಈ ಕೆರೆ ಐವತ್ತು ವರ್ಷಗಳ ಬಳಿಕ ಸಂಪೂರ್ಣವಾಗಿ ಭರ್ತಿಯಾಗಿ ಕೋಡಿಬಿದ್ದಿದೆ. ಕಳೆದ ಐವತ್ತು ವರ್ಷಗಳ ಹಿಂದೆ ಇದೇ ಕೆರೆಯನ್ನು ನೆಚ್ಚಿಕೊಂಡಿದ್ದ ಜನ ಜಾನುವಾರುಗಳಿಗೆ ಕುಡಿಯಲು ನೀರಿಲ್ಲದೆ ಇದ್ದಿದ್ದರಿಂದ ಪಕ್ಕದ ಊರುಗಳಿಗೆ ತೆರಳಿ ನೀರು ತಂದು ಕುಡಿದಿರುವ ನೆನಪುಗಳನ್ನು ಗ್ರಾಮಸ್ಥರು ಮೆಲುಕು ಹಾಕಿದರು.
'ಕಳೆದ 45 ರಿಂದ 50 ವರ್ಷಗಳ ಕಾಲ ಈ ಕೆರೆಯಲ್ಲಿ ನೀರು ಕಂಡಿದ್ದಿಲ್ಲ. ಮಳೆ ಬಿದ್ದ ಪರಿಣಾಮ ಕೆರೆ ತುಂಬಿದೆ. ಮೆಕ್ಕೆಜೋಳ, ಅಡಿಕೆ, ತೆಂಗು, ಸೊಪ್ಪು ಬೆಳೆಗೆ ಈ ನೀರು ಅವಶ್ಯಕವಾಗಿದೆ ಎಂದು' ಗ್ರಾಮಸ್ಥರಾದ ವಿಜಯ್ ತಿಳಿಸಿದರು.
'ಸುಮಾರು ಒಂದು ಗಂಟೆಗಳ ಕಾಲ ನಿರಂತರವಾಗಿ ಮಳೆ ಸುರಿದಿದ್ದರಿಂದ ಇಡೀ ಕೆರೆ ತುಂಬಿ ಕೋಡಿ ಬಿದ್ದಿದೆ. ನಾಲ್ಕೈದು ವರ್ಷಗಳ ಹಿಂದೆ ನಮಗೆ ಕುಡಿಯಲು ನೀರಿರಲಿಲ್ಲ. ಪಂಚಾಯ್ತಿಯ ಟ್ಯಾಂಕರ್ಗಳಿಂದ ಹತ್ತತ್ತು ಕೊಡ ನೀರನ್ನು ತಂದು ನಮಗೆ ಕುಡಿಯಲು ತಂದುಕೊಡುತ್ತಿದ್ದರು. ಅದರಲ್ಲಿ ಪಾಚಿ ಕಟ್ಟಿರುತ್ತಿತ್ತು. ಅದನ್ನು ಬಟ್ಟೆಯಿಂದ ಸೋಸಿ ಹುಳುಗಳನ್ನು ತೆಗೆದು ಕುಡಿಯಬೇಕಿತ್ತು.
ಅಂತರ್ಜಲ ಮಟ್ಟ ಹೆಚ್ಚಳ: ಇನ್ನು, ಈ ಕೆರೆ ತುಂಬಿದ್ದರಿಂದ ಸುತ್ತ ಇರುವ ಜಮೀನುಗಳಲ್ಲಿರುವ ಬೋರ್ವೆಲ್ಗಳಲ್ಲಿ ಜೀವಜಲ ಉಕ್ಕುತ್ತಿದೆ. ಐದು ನೂರು ಬೋರ್ ವೆಲ್ಗಳಿದ್ದು, ಪ್ರತಿಯೊಂದು ಕೊಳವೆ ಬಾವಿಗಳಲ್ಲಿ ನೀರು ಹೆಚ್ಚಳವಾಗಿದೆ. ಹೆಬ್ಬಾಳು ಕೆರೆ ತುಂಬಿದ್ದರಿಂದ ಅಂತರ್ಜಲ ಮಟ್ಟ ಹೆಚ್ಚಾಗಿದೆ. ಕೆರೆ ತುಂಬಿ ಕೋಡಿ ಬಿದ್ದಿದ್ದರಿಂದ ಮುಡೇನ್ ಹಳ್ಳಿ, ಗುಡಾಳು, ಮಂಡ್ಲೂರು, ಕೆಂಚನಹಳ್ಳಿ, ಹಾಲುವರ್ತಿ, ಗುಮ್ಮನೂರು ಹೀಗೆ ಎಲ್ಲಾ ಗ್ರಾಮದಲ್ಲಿ ಕೊಳವೆ ಬಾವಿಗಳಲ್ಲಿ ಸುಲಭವಾಗಿ ನೀರು ದೊರೆಯುತ್ತಿದೆ. ಒಳ್ಳೆ ಮಳೆಯಾಗಿದ್ದರಿಂದ ಇಷ್ಟೆಲ್ಲ ಆಗಲು ಸಾಧ್ಯವಾಯಿತು' ಎಂದು ಗ್ರಾಮಸ್ಥ ರುದ್ರಮುನಿ ಸಂತಸ ವ್ಯಕ್ತಪಡಿಸಿದ್ದಾರೆ.
ರೈತರ ಮೊಗದಲ್ಲಿ ಮಂದಹಾಸ: ಒಟ್ಟಾರೆ ಐವತ್ತು ವರ್ಷಗಳಿಂದ ಕೆರೆಯಲ್ಲಿ ಹನಿ ನೀರಿರಲಿಲ್ಲ. ಜನಜಾನುವಾರುಗಳಿಗೆ ಕುಡಿಯಲು ನೀರಿಲ್ಲದೆ ಇರುವ ಸಂದರ್ಭದಲ್ಲಿ ಮಳೆರಾಯ ಈ ಗ್ರಾಮಸ್ಥರ ಕೈಹಿಡಿದಿದ್ದಾನೆ. ಉತ್ತಮವಾಗಿ ಮಳೆಯಾದ ಬೆನ್ನಲ್ಲೇ ಇಡೀ ಹೆಬ್ಬಾಳು ಕೆರೆ ತುಂಬಿರುವುದರಿಂದ ರೈತರು ಖುಷ್ ಆಗಿದ್ದಾರೆ.
ಓದಿ: ಮಳೆ ಹಾನಿ ಪ್ರದೇಶಗಳಿಗೆ ಸಿದ್ದರಾಮಯ್ಯ ಭೇಟಿ; ಬೆಳ್ಳಂದೂರು ಪರಿಸ್ಥಿತಿ ವೀಕ್ಷಣೆ