ಹರಿಹರ: ಕೋಲಾರ ಜಿಲ್ಲೆ ಬಂಗಾರಪೇಟೆಯಲ್ಲಿ ಕರ್ತವ್ಯ ನಿರತ ತಹಸೀಲ್ದಾರರ ಹತ್ಯೆಯನ್ನು ಖಂಡಿಸಿ ತಾಲೂಕು ಸರ್ಕಾರಿ ನೌಕರರ ಸಂಘದ ವತಿಯಿಂದ ಪ್ರತಿಭಟನೆ ನಡೆಸಿ, ನ್ಯಾಯ ಕೋರಿ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿದ ನಂತರ ಮಾತನಾಡಿದ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿಜಯ ಮಹಾಂತೇಶ್, ಕರ್ತವ್ಯದಲ್ಲಿದ್ದ ತಹಶೀಲ್ದಾರರನ್ನು ಹತ್ಯೆ ಮಾಡಿರುವುದು ಖಂಡನೀಯ. ಹತ್ಯೆ ಎಸಗಿದ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.
ಪೊಲೀಸರ ಸಮ್ಮುಖದಲ್ಲಿ ಜಮೀನಿನ ಸರ್ವೇ ಮಾಡುತ್ತಿದ್ದ ಕರ್ತವ್ಯ ನಿರತ ತಹಶೀಲ್ದಾರ್‌ರನ್ನೇ ಹತ್ಯೆ ಮಾಡಿರುವ ಕೃತ್ಯವು ಸಿಬ್ಬಂದಿಯಲ್ಲಿ, ಅಧಿಕಾರಿಗಳಲ್ಲಿ ಆತಂಕ ಹುಟ್ಟಿಸಿದೆ. ರಾಜ್ಯದಲ್ಲಿ ಕರ್ತವ್ಯ ನಿರತ ಸರ್ಕಾರಿ ಅಧಿಕಾರಿಗಳ ಮೇಲೆ ಆಗಾಗ ಇಂತಹ ಹಲ್ಲೆಗಳು ಸಂಭವಿಸುತ್ತಲೇ ಇವೆ. ಅದರಲ್ಲೂ ಕಂದಾಯ, ಭೂಮಾಪನ, ಅರ್.ಡಿ.ಪಿ.ಆರ್ ಇಲಾಖೆ ಸೇರಿದಂತೆ ಹಲವು ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳ ಮೇಲೆ ಇಂಥ ಹಲ್ಲೆ ಪ್ರಕರಣ ನಡೆಯುತ್ತಲೇ ಇರುತ್ತವೆ ಎಂದರು.
ಸರ್ಕಾರದ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಕಾರ್ಯಾಂಗ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿ/ ನೌಕರರು ನಿರ್ಭಯವಾಗಿ ಕರ್ತವ್ಯ ನಿರ್ವಹಿಸುವಂಥ ವಾತಾವರಣ ಸೃಷ್ಟಿಯಾಗಬೇಕು. ಇಂಥ ಘಟನೆಗಳು ಮರುಕಳಿಸದಂತೆ ಕೂಡಲೆ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.