ದಾವಣಗೆರೆ: 2023 ಹೊಸ ವರ್ಷವನ್ನು ಅದ್ಧೂರಿ ಹಾಗೂ ಸಂಭ್ರಮದಿಂದ ಸ್ವಾಗತಿಸಲು ಬೆಣ್ಣೆ ದಾವಣಗೆರೆ ಜನತೆ ಸಜ್ಜಾಗಿದೆ. ಹೊಸ ವರ್ಷ ಸಂಭ್ರಮಾಚರಣೆ ಹಿನ್ನೆಲೆ ನಗರದ ಬೇಕರಿಗಳಲ್ಲಿ ವಿಶಿಷ್ಟ ರೀತಿ ಕೇಕ್ ಗಳನ್ನು ತಯಾರಿಸಲಾಗಿದೆ.
ಹೌದು.. ನಗರದ ಸುಪ್ರಸಿದ್ಧವಾಗಿರುವ ಆಹಾರ್ 2000 ಬೇಕರಿ ಮಾಲೀಕ ರಮೇಶ್ ಅವರು ಸಹ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಕೇಕ್ನಲ್ಲೇ ಮಂದಿರ, ಮಸೀದಿ, ಚರ್ಚ್ ನಂಥ ವಿಶಿಷ್ಟ ಆಕೃತಿಗಳನ್ನು ತಯಾರಿಸಿದ್ದು, ಇದರ ಮೂಲಕ ಸಮಾಜಕ್ಕೆ ಭಾವೈಕ್ಯತೆ ಸಂದೇಶದ ಅರಿವು ಮೂಡಿಸುತ್ತಿದ್ದಾರೆ.
ಗಮನ ಸೆಳೆದ ವಿವಿಧ ಕೇಕ್: ಹೊಸ ವರ್ಷಕ್ಕೆ ಆಹಾರ 2000 ಬೇಕರಿಯವರು ಸ್ವಲ್ಪ ವಿಭಿನ್ನವಾಗಿ ಕೇಕ್ ಮೇಳವನ್ನು ಹಮ್ಮಿಕೊಂಡಿದ್ದಾರೆ. ಈ ಬೇಕರಿಯಲ್ಲಿ 22 ವರ್ಷಗಳಿಂದ ಹೊಸ ವರ್ಷ ಸ್ವಾಗತಿಸಲು ವಿಶೇಷ ಕೇಕ್ ಗಳನ್ನು ತಯಾರಿಸಲಾಗುತ್ತಿದೆ. ಅದರಂತೆ ಈ ವರ್ಷವೂ ಸಹ ಸರ್ವ ಧರ್ಮ ಸಮನ್ವಯ ಸಾರುವ ಉದ್ದೇಶದಿಂದ ನಿರ್ಮಾಣ ಹಂತದ ಅಯೋಧ್ಯೆ ಶ್ರೀರಾಮ ಮಂದಿರ ಕೇಕ್, ದೆಹಲಿಯ ಜಾಮೀಯಾ ಮಸೀದಿ, ಮಂಗಳೂರಿನ ಸಂತೆಕಟ್ಟೆ ಚರ್ಚ್ ಅನ್ನು ಕೇಕ್ ನಲ್ಲಿ ಸೃಷ್ಟಿಸಿದ್ದು, ಜನರನ್ನು ಆಕರ್ಷಿಸುತ್ತಿವೆ.
ಕೇಕ್ನಲ್ಲಿ ಅರಳಿದ ಭಾವೈಕ್ಯತೆ: ಭಾವೈಕ್ಯತೆಯನ್ನು ಸಾರುವ ಮಂದಿರ ಮಸೀದಿ ಚರ್ಚ್ ಕೇಕ್ ಗಳನ್ನು ನೋಡಲು ಜನತೆ ಮುಗಿಬೀಳುತ್ತಿದ್ದಾರೆ. ಪ್ರಸ್ತುತವಾಗಿ ಕೆಲವೆಡೆ ಧರ್ಮ ದಂಗಲ್ ನಡೆಯುತ್ತಿದ್ದರೂ, ಮಾಲೀಕ ರಮೇಶ್ ಅವರು ಈ ಭಾವೈಕ್ಯತೆ ಸಾರುವ ಕೇಕ್ ಗಳನ್ನು ತಯಾರಿಸಿ ಸಮಾನತೆ ಸಾರಿದ್ದಾರೆ.
2000ದಿಂದ ಕೇಕ್ ಮೇಳ... 2000 ಇಸವಿಯಲ್ಲಿ ಆರಂಭವಾಗಿದ್ದರಿಂದ 'ಆಹಾರ್ 2000' ಬೇಕರಿ ಎಂದು ನಾಮಕರಣ ಮಾಡಲಾಗಿತ್ತು. ಅಲ್ಲಿಂದ ಹಿಡಿದು ಪ್ರಸ್ತುತ 2023 ತನಕ ಪ್ರತಿ ವರ್ಷ ಒಂದೊಂದು ಕೇಕ್ ಗಳನ್ನು ತಯಾರು ಮಾಡಿ ಪ್ರದರ್ಶನಕ್ಕಿಡಲಾಗುತ್ತದೆ. ವಿಧಾನಸೌಧ, ಮೈಸೂರು ಅರಮನೆ, ಗೋಲ್ ಗುಂಬಜ್, ಬೇಲೂರು ಹಳೇಬೀಡು ದೇವಾಲಯ, ಏರಿಯಲ್ ಟವರ್, ತಿರುಪತಿ ದೇವಾಲಯ, ತಾಜ್ ಹೋಟೆಲ್, ಕ್ಲಿನ್ ಟವರ್, ಲಂಡನ್ ಬ್ರಿಡ್ಜ್ ಹೀಗೆ ಪ್ರತಿ ವರ್ಷ ಒಂದೊಂದು ಕಾನ್ಸೆಪ್ಟ್ ಗಳನ್ನು ಹಾಕಿಕೊಂಡು ಜಿಲ್ಲೆಯ ಜನರನ್ನು ಆಕರ್ಷಿಸುತ್ತಿದ್ದಾರೆ.
ಬಲಿಷ್ಠ ಭಾರತದ ಕನಸು: ಎಲ್ಲರೂ ಭಾವೈಕ್ಯತೆಯಿಂದ ಕೈ ಜೋಡಿಸಿದ್ರೇ ಒಂದು ಬಲಿಷ್ಠ ಭಾರತ ನಿರ್ಮಾಣದ ದೃಷ್ಟಿಯಿಂದ ಸರ್ವ ಧರ್ಮ ಮಂದಿರ ಮಸೀದಿ ಚರ್ಚ್ ನಿರ್ಮಾಣ ಮಾಡಲಾಗಿದೆ. ಅದನ್ನು ನಿರ್ಮಾಣ ಮಾಡಲು 150 ಕೆ.ಜಿ ಸಕ್ಕರೆ ಹಾಗೂ ಜಿಡ್ಡನ್ನು ಬಳಕೆ ಮಾಡಲಾಗಿದೆ. ಇದನ್ನು ನಿರ್ಮಿಸಲು ಒಂದೂವರೆ ತಿಂಗಳು ಕಾಲಾವಕಾಶ ಬೇಕು. ಇದನ್ನು ಖುದ್ದು ಆಹಾರ್ 2000 ಬೇಕರಿಯವರು ನಿರ್ಮಿಸಿದ್ದು, ಸಂತಸ ತಂದಿದೆ ಎಂದು ಮಾಲೀಕ ರಮೇಶ್ ತಿಳಿಸಿದ್ದಾರೆ.
ಹೊಸ ವರ್ಷಕ್ಕೆ ಮಾರಾಟ ಜೋರು: ಹೊಸ ವರ್ಷ ಹಿನ್ನೆಲೆ ಬೆಣ್ಣೆ ನಗರಿ ದಾವಣಗೆರೆ ಮಂದಿ ಕೇಕ್ ಖರೀದಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಇನ್ನು ಜನ್ರೀಗೆ ಕೇಕ್ ಮಾರಾಟ ಮಾಡಲು ಆಹಾರ್ 2000 ಬೇಕರಿ ಸಿಬ್ಬಂದಿ ತರಹವೇವಾರಿ ಕೇಕ್ಗಳನ್ನು ಸಿದ್ಧಪಡಿಸಿದ್ದಾರೆ.
ವೆನಿಲ್ಲಾ, ಪೈನಾಪಲ್, ಸ್ಟ್ರಾಬೆರಿ, ಹೀಗೆ ಸಾಕಷ್ಟು ಕೇಕ್ ಗಳನ್ನು ತಯಾರಿಸಿ ಗ್ರಾಹಕರನ್ನು ಬೇಕರಿಯವರು ಸೆಳೆಯುತ್ತಿದ್ದಾರೆ. ಕಳೆದ ಬಾರಿ ಕೋವಿಡ್ ಇರುವ ಕಾರಣ ವ್ಯಾಪಾರಕ್ಕೆ ಭಾರಿ ಹೊಡೆತ ಬಿದ್ದಿತ್ತು. ಅದ್ರೇ ಈ ಬಾರಿ ಅಂತಹದ್ದೇನು ಇಲ್ಲ, ಆದ್ರೆ ವ್ಯಾಪಾರ ನೋಡ್ಬೇಕು ಎನ್ನುತ್ತಾರೆ ಮಾಲೀಕ ರಮೇಶ್.
ಹೊಸತನ್ನು ತರಲಿ ನ್ಯೂಯರ್.. ಈ ಹೊಸ ವರ್ಷವು ಜನರ ಬಾಳಲ್ಲಿ ಹೊಸತನ್ನು ತರಲಿ. ಹೊಸ ಆಲೋಚನೆಗಳೊಂದಿಗೆ ನೂತನ ಸಂವತ್ಸರವನ್ನು ಬರಮಾಡಿಕೊಳ್ಳೋಣ. ಜೊತೆಗೆ ಸಾಮಾಜಿಕ ಸಾಮರಸ್ಯವನ್ನು ಸಾರೋಣ ಎಂದು ಈಟಿವಿ ಭಾರತ ಮೂಲಕ ಕೋರುತ್ತೇವೆ