ಬೆಣ್ಣೆನಗರಿ ದಾವಣಗೆರೆ ದುಗ್ಗಮ್ಮ ದೇವಿ, ಆಂಜನೇಯ, ಕರಿಯಮ್ಮ, ಹರಿಹರೇಶ್ವರ ದೇವಾಲಯಗಳಿಂದ ಕೂಡಿರುವ ಜಿಲ್ಲೆ. ದಾವಣಗೆರೆ ತಾಲೂಕಿನ ಹಳೇಬಾತಿ ಎಂಬ ಗ್ರಾಮ ಇದೀಗ ಹೆಸರುವಾಸಿ. ಇಡೀ ಜಿಲ್ಲೆಯ ಸುತ್ತಮುತ್ತಲ ಭಕ್ತರನ್ನು ತನ್ನ ಒಡಲಿನಲ್ಲಿಟ್ಟುಕೊಂಡು ಹನುಮ ಕಾಯುತ್ತಿದ್ದಾನೆ.
ಪವಾಡ ಪುರುಷ ಆಂಜನೇಯ ದೇವಾಲಯಕ್ಕೆ ಬರುವ ಭಕ್ತರು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಸಲುವಾಗಿ ಹರಕೆ ಕಟ್ಟಿಕೊಳ್ಳುತ್ತಾರೆ. ಅಚ್ಚರಿ ಅಂದ್ರೆ, ಹರಕೆ ಮಾಡಿದ ಕೆಲವೇ ದಿನಗಳಲ್ಲಿ ಅ ಹರಕೆ ಪೂರ್ಣಗೊಳ್ಳುತ್ತದೆಯಂತೆ. ಹೀಗಾಗಿ ಈ ದೇವಾಲಯಕ್ಕೆ ದಾವಣಗೆರೆ, ಹರಿಹರ, ಹೊನ್ನಾಳಿ, ಹಾವೇರಿ, ಬೆಂಗಳೂರು, ಹುಬ್ಬಳಿ - ಧಾರವಾಡ, ಬಳ್ಳಾರಿ ಸೇರಿದಂತೆ ರಾಜ್ಯದ ಮೂಲೆ ಮೂಲೆಯಿಂದ ಭಕ್ತರು ಭೇಟಿ ನೀಡ್ತಾರೆ.
ಇನ್ನು, ಹಳೇಬಾತಿ ಆಂಜನೇಯ, ಡಿಸಿ ಮಂಹಾತೇಶ್ ಬೀಳಗಿಯವರ ನೆಚ್ಚಿನ ದೇವರಂತೆ. ಹಲವು ವರ್ಷಗಳ ಹಿಂದೆ ಪ್ರಸ್ತುತ ಮಂಹಾತೇಶ್ ಬೀಳಗಿ ಎಸಿಯಾಗಿ ದಾವಣಗೆರೆಯಲ್ಲಿ ಕಾರ್ಯನಿರ್ವಹಸುತ್ತಿದ್ದರಂತೆ. ಈ ವೇಳೆ ಸರ್ಕಾರ ಅವರನ್ನು ಇದ್ದಕ್ಕಿದ್ದಂತೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತಂತೆ. ಇದರಿಂದ ಬೇಸರಗೊಂಡ ಬೀಳಗಿಯವರು ಆಂಜನೇಯನ ಸನ್ನಿಧಾನಕ್ಕೆ ಭೇಟಿ ನೀಡಿ, ಮುಂದಿನ ದಿನಗಳಲ್ಲಿ ದಾವಣಗೆರೆ ಡಿಸಿಯಾಗಿ ಅಧಿಕಾರಿ ಹಿಡಿಯುವಂತೆ ಮಾಡು ಎಂದು ಹನುಮನಿಗೆ ಏಳೂವರೆ ರೂಪಾಯಿ ಕಾಣಿಕೆ ಸಲ್ಲಿಸಿದ್ದರಂತೆ. ಅಂದುಕೊಂಡಂತೆ ಮಹಾಂತೇಶ್ ಬೀಳಗಿ ಇದೀಗ ದಾವಣಗೆರೆ ಡಿಸಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಅಂದಿನಿಂದ ಇಂದಿನವರೆಗೂ ಡಿಸಿ ಬೀಳಗಿಯವರು ಪ್ರತಿ ಹದಿನೈದು ದಿನಕ್ಕೊಮ್ಮೆ ಆಂಜನೇಯ ದೇವಾಲಯಕ್ಕೆ ಭೇಟಿ ನೀಡುತ್ತಿದ್ದಾರಂತೆ.
ಓದಿ: ಬೆಣ್ಣೆ ನಗರಿಯ ಈ ಕುಟುಂಬದ ಬದುಕು ಬದಲಿಸಿತು ಮೋದಿ ಧರಿಸಿದ ‘ಆ’ ಮಾಸ್ಕ್!
ಈ ಆಂಜನೇಯ ಸ್ವಾಮಿ ದೇವಾಲಯದ ಕೂಗಳತೆಯಲ್ಲಿರುವ ಆಂಜನೇಯ ಸ್ವಾಮಿಯ ಪಾದರಕ್ಷೆಗಳು ಕೂಡ ಅಷ್ಟೇ ವಿಶೇಷತೆಯಿಂದ ಕೂಡಿವೆ. ಇಲ್ಲಿರುವ ಪಾದುಕೆಗಳನ್ನು ಹಸು ಹಾಗೂ ಕರುಗಳ ಚರ್ಮದಿಂದ ನಿರ್ಮಿಸಲಾಗಿದೆಯಂತೆ. ಈ ಪಾದುಕೆಗಳ ಬಳಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರೆ ಕೆಲವೇ ದಿನಗಳಲ್ಲಿ ಬಗೆಹರಿಯುತ್ತವೆಯಂತೆ. ಜ್ವರ, ಕೆಮ್ಮು, ನೆಗಡಿ, ಮಲೇರಿಯಾ, ಕಾಲರಾ, ಮೈ ಕೈ ನೋವು, ಸುಸ್ತು, ಈ ಎಲ್ಲ ಕಾಯಿಲೆಗಳಿಗೆ ಈ ಪಾದುಕೆಗಳಿಂದ ಬೆಚ್ಚಗೆ ಮಾಡಿದರೆ ಸಾಕು ಕೆಲವೇ ಗಂಟೆಗಳಲ್ಲಿ ರೋಗಿಗಳು ಸರಿ ಹೋಗುತ್ತರಂತೆ. ಈ ಪಾದುಕೆಗಳ ಮುಂದೆ ನಿಂತು ಬೇಡಿಕೊಂಡರೆ ಸಾಕಂತೆ ತಮ್ಮ ಸಮಸ್ಯೆಗಳು ಕೂಡ ದೂರ ಆಗುತ್ತವೆ ಎಂಬುದು ಈ ಹಳೇಬಾತಿ ಗ್ರಾಮಸ್ಥರ ನಂಬಿಕೆ.
ಈ ಹಳೇ ಬಾತಿ ಗ್ರಾಮ ಹಲವು ವರ್ಷಗಳ ಹಿಂದೆ ಕಾಡಾಗಿದ್ದಾಗ, ದನ ಮೇಯಿಸುವ ವೇಳೆ ವ್ಯಕ್ತಿಯೊಬ್ಬನಿಗೆ ಈ ಆಂಜನೇಯ ಸ್ವಾಮಿಯ ಉದ್ಭವ ಮೂರ್ತಿ ಕಂಡಿದೆಯಂತೆ. ಆ ವ್ಯಕ್ತಿ ಗ್ರಾಮದ ಹಿರಿಯರಿಗೆ ತಿಳಿಸಿದ ಬಳಿಕ ಈ ದೇವಾಲಯ ನಿರ್ಮಾಣ ಮಾಡಿದರು ಎಂಬುದು ಇತಿಹಾಸ. ದೇವಾಲಯ ನಿರ್ಮಾಣದ ಬಳಿಕ ಈ ಗ್ರಾಮಕ್ಕೆ ಮಾತ್ರವಲ್ಲದೇ ಹೊರ ಜಿಲ್ಲೆಗಳಿಂದ ಬರುವ ಭಕ್ತರಿಗೂ ಒಳ್ಳೆಯದಾಗಿದೆ ಅಂತಾರೆ ಭಕ್ತರು.