ದಾವಣಗೆರೆ: ದೊಡ್ಡ ದೊಡ್ಡ ಮಲ್ಟಿ ನ್ಯಾಷನಲ್ ಕಂಪನಿಗಳು ಕಾಲಿಟ್ಟಿವೆ ಎಂದರೆ ಆ ಪ್ರದೇಶ ಅಭಿವೃದ್ಧಿಯಾಗುವ ಮೂಲಕ ಜನರಿಗೆ ವಿಫುಲ ಉದ್ಯೋಗಾವಕಾಶಗಳು ಸಿಗುತ್ತವೆ ಎನ್ನುವ ಭರವಸೆ ಇರುತ್ತದೆ. ಆದ್ರೆ ಇದರ ಜೊತೆ ಪರಿಸರ ನಾಶ, ರೈತರ ಅಳಿವು-ಉಳಿವು ಅಡಗಿರುತ್ತದೆ. ಅಂತಹದ್ದೇ ಒಂದು ಕಂಪನಿಯಿಂದ ಹತ್ತಾರು ರೈತರೀಗ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.
ತಾಲೂಕಿನ ಹೆಬ್ಬಾಳು ಗ್ರಾಮದ ಬಳಿ ಇರುವ ಗ್ರೀನ್ ಅಗ್ರೋ ಪ್ಯಾಕ್ ಪ್ರೈವೇಟ್ ಲಿಮಿಟೆಡ್ ರೈತರನ್ನು ಸಂಕಷ್ಟಕ್ಕೆ ತಳ್ಳಿದೆ. ಹೆಬ್ಬಾಳು ಗ್ರಾಮದ ಪಕ್ಕದಲ್ಲಿರುವ ಈ ಮಲ್ಟಿ ನ್ಯಾಷನಲ್ ಕಂಪನಿ ಸುತ್ತಮುತ್ತಲಿರುವ ಜಮೀನುಗಳಿಗೆ ಶಾಪವಾಗಿದೆ ಎನ್ನುತ್ತಿದ್ದಾರೆ ಅಲ್ಲಿನ ಜನರು.
ಇಲ್ಲಿ ಔಷಧಿಗಳ ತಯಾರಿಕೆಗಾಗಿ ಸೌತೆಕಾಯಿ ಸೇರಿದಂತೆ ಹಲವು ತರಕಾರಿಗಳನ್ನು ಪ್ಲಾಸ್ಟಿಕ್ ಡ್ರಂಗಳಲ್ಲಿ ಆ್ಯಸಿಡ್ ಸೇರಿದಂತೆ ಹಲವು ರಾಸಾಯನಿಕಗಳನ್ನು ಮಿಶ್ರಿಣ ಮಾಡಿ ನೆನೆಹಾಕುತ್ತಾರೆ. ಹೀಗೆ ನೆನೆಹಾಕಿದ ನಂತರ ತೆಗೆದ ರಾಸಾಯನಿಕ ಮಿಶ್ರಿತ ನೀರನ್ನು ಮೂರು ಎಕರೆಯಲ್ಲಿರುವ ಗುಂಡಿಯಲ್ಲಿ ಅವೈಜ್ಞಾನಿಕವಾಗಿ ಬಿಡಲಾಗುತ್ತಿದೆ. ರಾಸಾಯನ ಮಿಶ್ರಣ ನೀರು ಅಂತರ್ಜಲದಲ್ಲಿ ಸೇರಿಕೊಂಡು ಬೋರ್‌ವೆಲ್‌ಗಳಲ್ಲಿ ಬರುವ ನೀರು ಬೆಳೆ ಬೆಳೆಯುವುದಕ್ಕೆ ಯೋಗ್ಯವಲ್ಲದ ರೀತಿಯಾಗಿದೆ.
ಈ ಕಂಪನಿಯ ಪಕ್ಕದಲ್ಲಿರುವ ಎರಡು ಎಕರೆ ಜಮೀನಿನಲ್ಲಿ ರುದ್ರೇಶ್ ಎಂಬುವರ ಅಡಿಕೆ ತೋಟ ಇದ್ದು, 11 ವರ್ಷಗಳಾದರೂ ಫಲ ಸಿಗದೆ ನಷ್ಟ ಅನುಭವಿಸುತ್ತಿದ್ದಾರಂತೆ. ತರಕಾರಿ, ಕಬ್ಬು ಬೆಳೆಯುವುದರಲ್ಲಿ ಇಡೀ ಗ್ರಾಮಕ್ಕೆ ಮಾದರಿಯಾಗಿದ್ದ ಈ ಜಮೀನು ಈಗ ಬರಡಾಗಿದೆ. ಈ ನೀರಿನಿಂದ ಅಡಿಕೆ ಮರಗಳು ಕೂಡ ಒಣಗಿ ಹೋಗಿವೆ. ಅಲ್ಲದೆ ಅಡಿಕೆ ಗೋಟು ರೋಗ ಬಂದು ಬೀಳುತ್ತಿದೆ. ಇವರು ತನ್ನ ಎರಡು ಎಕರೆ ಅಡಿಕೆ ತೋಟದಲ್ಲಿ ಪ್ರತಿ ವರ್ಷ 7 ರಿಂದ 8 ಲಕ್ಷ ರೂ ಆದಾಯ ಬರುವ ನಿರೀಕ್ಷೆ ಹೊಂದಿದ್ದರು. ಆದ್ರೀಗ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದರೂ ಒಂದು ರೂಪಾಯಿ ಕೂಡ ಲಾಭವಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ.
ಇದನ್ನೂ ಓದಿ : ದಾವಣಗೆರೆಯ ಆಟೋ ಚಾಲಕರಿಗೆ ಆಸರೆ: 5 ಸಾವಿರ ಆಟೋ ದತ್ತು ಪಡೆದ ಉದ್ಯಮಿ
ರಾಸಾಯನ ಮಿಶ್ರಣದ ನೀರು ಜಾಸ್ತಿಯಾಗಿ ಹೊರ ಬರುತ್ತಿದ್ದು, ಸುತ್ತಮುತ್ತಲಿನ ಮುನ್ನೂರಕ್ಕೂ ಹೆಚ್ಚು ಎಕರೆ ಜಮೀನುಗಳಿಗೆ ಆ ನೀರು ಹೋಗಿ ರೈತರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಅಲ್ಲದೆ ಇಲ್ಲಿಂದ ಹಾಲವರ್ತಿ ಕೆರೆಗೂ ಕೂಡ ಈ ಕೆಮಿಕಲ್ ಮಿಶ್ರಣ ನೀರು ಸೇರಿ ಸಾವಿರಾರು ಜಲಚರಗಳು ಸಾಯುತ್ತಿವೆ. ಸಾಕಷ್ಟು ಬಾರಿ ಇಲ್ಲಿನ ರೈತರು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ರೈತರು.