ದಾವಣಗೆರೆ: ಪ್ರತ್ಯೇಕ ಘಟನೆಗಳಲ್ಲಿ ಜಿಲ್ಲೆಯಲ್ಲಿ ಇಬ್ಬರು ಯುವಕರು ಸಾವಿಗೀಡಾಗಿದ್ದಾರೆ. ಮೀನು ಹಿಡಿಯಲು ಹೋಗಿದ್ದಾಗ ವಿದ್ಯುತ್ ಸ್ಪರ್ಶಿಸಿ ಸರ್ಕಾರಿ ನೌಕರ ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮಾವಿನಕಟ್ಟೆ ಗ್ರಾಮದ ಕ್ಯಾನಲ್ ಬಳಿ ನಡೆದಿದೆ. ಅಭಿಲಾಷ್ (28) ಮೃತರು.
ಮಾವಿನ ಕಟ್ಟೆ ಗ್ರಾಮಕ್ಕೆ ಹಾದುಹೋಗಿರುವ ಕಾಲುವೆಯಲ್ಲಿ ನೀರಿಲ್ಲದಿದ್ದರೂ, ಅಲ್ಲಲ್ಲಿ ಅಲ್ಪಸ್ವಲ್ಪ ನಿಂತುಕೊಂಡಿರುವ ನೀರಿನಲ್ಲಿ ಅಭಿಲಾಷ್ ಮೀನು ಹಿಡಿಯಲು ಹೋಗಿದ್ದರು. ಭದ್ರ ನಾಲೆಯಲ್ಲಿ ಅಕ್ರಮವಾಗಿ ಮೋಟಾರ್ಗಳನ್ನು ಅಳವಡಿಸಿದ್ದರಿಂದ ಮೀನು ಹಿಡಿಯಲು ನೀರಿಗಿಳಿದ ಯುವಕನಿಗೆ ವಿದ್ಯುತ್ ಪ್ರವಹಿಸಿದೆ. ತೋಟಗಳಿಗೆ ನೀರು ಪೂರೈಸಲು ನಾಲೆಗೆ ಅಕ್ರಮವಾಗಿ ಮೋಟರ್ಗಳನ್ನು ಅಳವಡಿಸಿದ್ದರಿಂದ ಅವಘಡ ಸಂಭವಿಸಿದೆ. ಚನ್ನಗಿರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಸ್ತೆ ಅಪಘಾತದಲ್ಲಿ ಯುವಕ ದುರ್ಮರಣ: ಜಿಲ್ಲೆಯ ಹರಿಹರ ತಾಲೂಕಿನ ಮಲೇಬೆನ್ನೂರು ಪಟ್ಟಣದ ಹೊರವಲಯದಲ್ಲಿ ಸಂಭವಿಸಿದ ಅಪಘಾತದಲ್ಲಿ ಯುವಕ ಮೃತಪಟ್ಟಿದ್ದಾರೆ. ಮಲೇಬೆನ್ನೂರು ನಿವಾಸಿ ಅಣ್ಣಪ್ಪ(30) ಮೃತರು. ತೀವ್ರ ಗಾಯಗೊಂಡಿದ್ದಅಣ್ಣಪ್ಪ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಬಂಕ್ ಬಳಿ ನಿಲ್ಲಿಸಿದ್ದ ಟ್ರ್ಯಾಕ್ಟರ್ಗೆ ಡಿಕ್ಕಿ ಹೊಡೆದು ದ್ವಿಚಕ್ರವಾಹನದಲ್ಲಿದ್ದ ಅಣ್ಣಪ್ಪನಿಗೆ ತಲೆ ಹಾಗೂ ಎದೆ ಭಾಗದಲ್ಲಿ ತೀವ್ರವಾದ ಪೆಟ್ಟು ಬಿದ್ದಿತ್ತು. ಸ್ಥಳೀಯರ ಸಹಾಯದಿಂದ ಸ್ಥಳೀಯ ಸಮುದಾಯದ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿ, ದಾವಣಗೆರೆ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆ ಸಾವಿಗೀಡಾಗಿದ್ದಾರೆ. ಮಲೇಬೆನ್ನೂರು ಪೋಲಿಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಇದನ್ನೂಓದಿ:ನಿರ್ಮಾಣ ಹಂತದ ಕಟ್ಟಡದ ಗೋಡೆ ಕುಸಿತ: ವಿದ್ಯಾರ್ಥಿ ಸಾವು, ಇನ್ನೊಬ್ಬ ಬಾಲಕನ ಸ್ಥಿತಿ ಗಂಭೀರ
ಅಡಿಕೆ ಹಾಳೆ ತಟ್ಟೆ ತಯಾರಿಕಾ ಘಟಕಕ್ಕೆ ಬೆಂಕಿ: ಚನ್ನಗಿರಿ ತಾಲೂಕಿನ ಮಾದಾಪುರ ಗ್ರಾಮದ ಅಡಿಕೆ ಹಾಳೆ ತಟ್ಟೆ ತಯಾರಿಕ ಘಟಕಕ್ಕೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಅಪಾರ ಪ್ರಮಾಣದ ಉಪಕರಣಗಳು ಬೆಂಕಿಗಾಹುತಿಯಾಗಿರುವ ಘಟನೆ ಕಳೆದ ತಡರಾತ್ರಿ ನಡೆದಿದೆ. ಮಾದಪುರ ಗ್ರಾಮದ ಗಂಗಾಧರ್ ಅವರಿಗೆ ಸೇರಿದ ಅಡಿಕೆ ಹಾಳೆ ತಟ್ಟೆ ತಯಾರಿಕಾ ಘಟಕಕ್ಕೆ ಆಕಸ್ಮಿಕ ಬೆಂಕಿ ತಗುಲಿದೆ. 1.20 ಲಕ್ಷ ಮೌಲ್ಯದ ಅಡಿಕೆ ತಟ್ಟೆಗಳು ಬೆಂಕಿಗಾಹುತಿ ಆಗಿವೆ. ನಾಲ್ಕು ಅಗ್ನಿಶಾಮ ದಳ ವಾಹನ ಸಮೇತ ಸಿಬ್ಬಂದಿ ಆಗಮಿಸಿ, ಕಾರ್ಯಾಚರಣೆ ಕೈಗೊಂಡಿದ್ದರು.
ಇದನ್ನೂಓದಿ: ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಟ್ರ್ಯಾಕ್ಟರ್ ಹರಿದು ಹೆಡ್ ಕಾನ್ಸ್ಟೇಬಲ್ ಸಾವು - ಕೊಲೆ ಶಂಕೆ