ದಾವಣಗೆರೆ: ಪೊಲೀಸರ ಹೆಸರು ಹೇಳಿಕೊಂಡು ಯುವಕರಿಬ್ಬರು ವೃದ್ಧರೊಬ್ಬರಿಂದ ಚಿನ್ನಾಭರಣ ಲೂಟಿ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.
ನಗರದ ಎಂಸಿಸಿ ಬಿ ಬ್ಲಾಕ್ನ ನಿವೃತ್ತ ಇಂಜಿನಿಯರ್ ಮಂಜುನಾಥ್ ಆಭರಣ ಕಳೆದುಕೊಂಡವರು. ವಾಯು ವಿಹಾರಕ್ಕೆ ತೆರಳಿದ್ದ ವೇಳೆ ಬಂದ ಇಬ್ಬರು ಯುವಕರು, "ನಾವು ಪೊಲೀಸರು, ಚಿನ್ನಾಭರಣ ಹಾಕಿಕೊಂಡು ಓಡಾಡಬೇಡಿ'' ಎಂದಿದ್ದಾರೆ. ಬಳಿಕ 15 ಗ್ರಾಂ ತೂಕದ ಚಿನ್ನದ ಸರ, ಉಂಗುರವನ್ನು ಕರ್ಚೀಪ್ನಲ್ಲಿ ಕಟ್ಟಿಕೊಡುವಂತೆ ನಾಟಕವಾಡಿದ್ದಾರೆ. ಮನೆಗೆ ಬಂದು ಕರ್ಚೀಪ್ ಬಿಚ್ಚಿ ನೋಡಿದಾಗ ಮೋಸ ಹೋಗಿರುವುದು ಗೊತ್ತಾಗಿದೆ.
ಅಂದಾಜು 75 ಸಾವಿರ ರೂ. ಮೌಲ್ಯದ ಬಂಗಾರದ ಸರ, ಉಂಗುರವನ್ನು ದುಷ್ಕರ್ಮಿಗಳು ದೋಚಿದ್ದಾರೆ. ಈ ಸಂಬಂಧ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿಟಿವಿಯಲ್ಲಿ ಕೃತ್ಯ ಸೆರೆಯಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.