ದಾವಣಗೆರೆ: ನಾನು ಕೇಂದ್ರ ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಆದ್ರೆ ರಾಜ್ಯದ 23 ಸಂಸದರಲ್ಲಿ ಯಾರಿಗಾದರೂ ಒಬ್ಬರಿಗೆ ಕೇಂದ್ರ ಸಚಿವ ಸ್ಥಾನ ಸಿಕ್ಕೇ ಸಿಗುತ್ತೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಭವಿಷ್ಯ ನುಡಿದಿದ್ದಾರೆ.
ಜಿಲ್ಲೆಯ ಚನ್ನಗಿರಿ ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಆಕ್ಸಿಜನ್ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ನಾನು ನನ್ನ ಕ್ಷೇತ್ರದಲ್ಲಿ ಸಾರ್ವಜನಿಕರ ಸೇವೆಯಲ್ಲಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜನರಿಗೆ ಉತ್ತಮ ಆಡಳಿತ ನೀಡುತ್ತಿದೆ. ಜನರೇ ಮೆಚ್ಚಿ ಬಿಜೆಪಿಗೆ ಅಧಿಕಾರ ನೀಡಿದ್ದಾರೆ. ಇದರ ಜವಾಬ್ದಾರಿ ನಮ್ಮ ಮೇಲೂ ಇದೆ ಎಂದರು.
ಇನ್ನು ಸಂಪುಟ ವಿಸ್ತರಣೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಂಸದರು, ಕೇಂದ್ರ ಸಚಿವ ಸಂಪುಟ ವಿಸ್ತರಣೆಯಲ್ಲಿ ಕರ್ನಾಟಕಕ್ಕೆ ಸಚಿವ ಸ್ಥಾನ ಸಿಕ್ಕೇ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಮುಂಬೈ ಪ್ರಯಾಣ ದಿಢೀರ್ ರದ್ದು: ಬೆಂಗಳೂರಿನತ್ತ ರಮೇಶ್ ಜಾರಕಿಹೊಳಿ
ಜಿಲ್ಲೆಯಲ್ಲಿ ಎರಡನೇ ಅಲೆ ಬಂದಾಗ ಆಕ್ಸಿಜನ್ ಕೊರತೆಯಾಗಿತ್ತು. ಅದ್ದರಿಂದ ಆ ಸಮಸ್ಯೆ ಬಗೆಹರಿಸಬೇಕೆಂದು ಹರಿಹರದ ಸರ್ಕಾರಿ ಆಸ್ಪತ್ರೆಗೆ 60 ಲಕ್ಷ ವೆಚ್ಚದ ಆಕ್ಸಿಜನ್ ಘಟಕವನ್ನು ನಮ್ಮ ತಂದೆ-ತಾಯಿಯ ಟ್ರಸ್ಟ್ ವತಿಯಿಂದ ಹಾಕಿಸಿದ್ದೇನೆ. ಇದಲ್ಲದೆ ಚಿತ್ರದುರ್ಗ, ಹರಪನಹಳ್ಳಿಗೂ ಒಂದೊಂದು ಆಕ್ಸಿಜನ್ ಪ್ಲಾಂಟ್ಗಳನ್ನು ಹಾಕಿಸುತ್ತಿದ್ದು, ಶಾಸಕರುಗಳಾದ ರೇಣುಕಾಚಾರ್ಯ, ಮಾಡಾಳ್ ವಿರೂಪಾಕ್ಷಪ್ಪ, ಎಸ್ ವಿ ರಾಮಚಂದ್ರಪ್ಪ ಆಯಾ ಕ್ಷೇತ್ರಕ್ಕೆ ಪ್ಲಾಂಟ್ಗಳನ್ನು ಹಾಕಿಸುತ್ತಿದ್ದಾರೆ. ಇದೀಗ ನಮ್ಮ ಜಿಲ್ಲೆಯಲ್ಲಿ ಮೂರನೇ ಅಲೆ ಬಂದರೂ ಕೂಡ ಯಾವುದೆ ಕಾರಣಕ್ಕೂ ಆಕ್ಸಿಜನ್ ಕೊರತೆ ಎದುರಾಗುವುದಿಲ್ಲ ಎಂದು ಸಿದ್ದೇಶ್ವರ್ ಸ್ಪಷ್ಟಪಡಿಸಿದರು.