ದಾವಣಗೆರೆ: ಲಿಂಗಾಯತ ಸಮುದಾಯಕ್ಕೆ ಶೇಕಡಾ 16ರಷ್ಟು ಮೀಸಲಾತಿ ನೀಡಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಒತ್ತಾಯಿಸಿದ್ದಾರೆ.
ತಮ್ಮ ನಿವಾಸದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮರಾಠ ಸಮುದಾಯಕ್ಕೆ ಹೋಲಿಸಿದರೆ ಲಿಂಗಾಯತರೇ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 2ಎಗೆ ಲಿಂಗಾಯತ ಸಮುದಾಯವನ್ನು ಸೇರಿಸಬೇಕು. ಈ ನಿಟ್ಟಿನಲ್ಲಿ ಸಿಎಂ ಯಡಿಯೂರಪ್ಪ ಜೊತೆ ಮಾತುಕತೆ ನಡೆಸುತ್ತೇನೆ ಎಂದರು.
ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕೆಂಬ ನಮ್ಮ ಬೇಡಿಕೆಯನ್ನು ರಾಜ್ಯ ಸರ್ಕಾರ ಈಡೇರಿಸಿದೆ. ಮರಾಠ ನಿಗಮ ಸ್ಥಾಪನೆ ಮಾಡಲಿ. ನಾವೇನೂ ಬೇಡ ಅನ್ನಲ್ಲ. ಅವರಿಗಿಂತ ನಾವೇ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಲಿಂಗಾಯತ ಸಮುದಾಯದ ನಿಗಮಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಬೆಂಗಳೂರಿನ ಡಿ.ಜೆ.ಹಳ್ಳಿಯಲ್ಲಿ ನಡೆದ ಗಲಾಟೆ ಸಂಬಂಧ ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ ಬಂಧನದ ಬಗ್ಗೆ ಕೇಳಿದ ಪ್ರಶ್ನೆಗೆ, ಈ ಬಗ್ಗೆ ಮಾಹಿತಿ ಇಲ್ಲ. ಹೆಚ್ಚು ಹೇಳಲಾರೆ ಎಂದರು.