ದಾವಣಗೆರೆ: ಕೊರೊನಾ ನಿಯಂತ್ರಣಕ್ಕೆ ಘೋಷಿಸಲಾದ ಲಾಕ್‍ಡೌನ್ ಹಿನ್ನೆಲೆ ಸಂಕಷ್ಟ ಅನುಭವಿಸಿದ್ದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಆರ್ಥಿಕ ಚಟುವಟಿಕೆಗಳ ಪುನಶ್ಚೇತನಕ್ಕೆ ಕೇಂದ್ರ ಸರ್ಕಾರ ಗ್ಯಾರಂಟೀಡ್ ಎಮೆರ್ಜೆನ್ಸಿ ಕ್ರೆಡಿಟ್ ಲೈನ್(ಜಿಇಸಿಎಲ್) ಯೋಜನೆ ಜಾರಿಗೆ ತಂದಿದ್ದು, ಜಿಲ್ಲೆಯ ಎಲ್ಲಾ ಎಂಎಸ್‍ಎಂಇಗಳು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಕರೆ ನೀಡಿದರು.
ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಕೇಂದ್ರ ಸರ್ಕಾರ ಘೋಷಿಸಿರುವ ಗ್ಯಾರಂಟೀಡ್ ಎಮರ್ಜೆನ್ಸಿ ಕ್ರೆಡಿಟ್ ಲೈನ್ ಯೋಜನೆ ಕುರಿತು ಎಂಎಸ್‍ಎಂಇಗಳು ಮತ್ತು ಬ್ಯಾಂಕರ್ಗಳಿಗೆ ಜಾಗೃತಿ ಮೂಡಿಸಲು ಏರ್ಪಡಿಸಲಾಗಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇದೀಗ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ಕೇಂದ್ರ ಸರ್ಕಾರ ಜಿಇಸಿಎಲ್ ಸಾಲ ಸೌಲಭ್ಯ ಯೋಜನೆ ಜಾರಿಗೆ ತಂದಿದೆ.
ಇದಕ್ಕಾಗಿ ರೂ. 3 ಲಕ್ಷ ಕೋಟಿ ಅನುದಾನ ಮೀಸಲಿಟ್ಟಿದ್ದು, ಅಕ್ಟೋಬರ್ 31ರೊಳಗೆ ಈ ಯೋಜನೆಯ ಸೌಲಭ್ಯ ಪಡೆಯಬೇಕು. ಆದ್ದರಿಂದ ಶೀಘ್ರವಾಗಿ ಎಂಎಸ್‍ಎಂಇಗಳು ಇದರ ಗರಿಷ್ಠ ಸದುಪಯೋಗ ಪಡೆಯಬೇಕು ಎಂದರು.
ಕೆನರಾ ಬ್ಯಾಂಕಿನ ವಿಭಾಗೀಯ ಪ್ರಬಂಧಕಿ ನಾಗರತ್ನ ಮಾತನಾಡಿ, ಕೆನರಾ ಬ್ಯಾಂಕ್‍ನ ನಮ್ಮ ವಿಭಾಗದಲ್ಲಿ ಪ್ರಸ್ತುತ 51 ಬ್ರಾಂಚ್‍ಗಳಿದ್ದು, 4500 ಅರ್ಹ ಖಾತೆದಾರರನ್ನು ಗುರುತಿಸಲಾಗಿದೆ. 1500 ಜನರಿಗೆ ರೂ. 15.5 ಕೋಟಿ ಸಾಲ ಮಂಜೂರು ಮಾಡಲಾಗಿದೆ. 500 ಜನ ಖಾತೆದಾರರು ತಮಗೆ ಸಾಲ ಬೇಡವೆಂದು ಬರೆದು ಕೊಟ್ಟಿದ್ದಾರೆ. ಈ ಯೋಜನೆಯಿಂದ ಯಾವುದೇ ಅರ್ಹ ಎಂಎಸ್‍ಎಂಇಗಳು ವಂಚಿತರಾಗಬಾರದೆಂದು ನಮ್ಮಲ್ಲಿನ ಅರ್ಹ ಖಾತೆದಾರರೆಲ್ಲರಿಗೆ ಈ ಬಗ್ಗೆ ತಿಳಿಸಿ ಸಾಲ ಮಂಜೂರು ಮಾಡಲಾಗುತ್ತಿದೆ ಎಂದು ಹೇಳಿದರು.